ಸೆಬಿ ರಿಲಯನ್ಸ್ ಇಂಡಸ್ಟೀಸ್ ಗೆ 30 ಲಕ್ಷ ರೂ.ದಂಡ ವಿಧಿಸಿದ್ದನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ರಿಲಯನ್ಸ್ ಇಂಡಸ್ಟೀಸ್ (Reliance Industries), ಸುಪ್ರೀಂ ಕೋರ್ಟ್ (PTI)
ಹೊಸದಿಲ್ಲಿ,ಡಿ.2: 2020ರಲ್ಲಿ ಫೇಸ್ ಬುಕ್ ನಿಂದ ಜಿಯೋ ಪ್ಲ್ಯಾಟ್ ಫಾರ್ಮ್ ಗಳಲ್ಲಿ ಹೂಡಿಕೆ ಕುರಿತು ಮಾಹಿತಿಯನ್ನು ತ್ವರಿತವಾಗಿ ಬಹಿರಂಗಗೊಳಿಸುವಲ್ಲಿ ವೈಫಲ್ಯಕ್ಕಾಗಿ ರಿಲಯನ್ಸ್ ಇಂಡಸ್ಟ್ರೀಸ್ ಲಿ. (ಆರ್ಐಎಲ್) ಮತ್ತು ಅದರ ಇಬ್ಬರು ಹಿರಿಯ ಅಧಿಕಾರಿಗಳಿಗೆ ಸೆಬಿ 30 ಲಕ್ಷ ರೂ.ಗಳ ದಂಡ ವಿಧಿಸಿದ್ದನ್ನು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಎತ್ತಿ ಹಿಡಿದಿದೆ.
ಮಾರುಕಟ್ಟೆಯ ಋಜುತ್ವವು ಪ್ರಮುಖ ಕಾರ್ಪೊರೇಟ್ ಸಂಸ್ಥೆಗಳಿಂದ ಪಾರದರ್ಶಕತೆಯನ್ನು ಬಯಸುತ್ತದೆ ಎಂದು ಅದು ಒತ್ತಿ ಹೇಳಿದೆ.
ಮುಖ್ಯ ನ್ಯಾಯಾಧೀಶ ಸೂರ್ಯಕಾಂತ್ ಮತ್ತು ನ್ಯಾ.ಜಾಯಮಾಲ್ಯಾ ಬಾಗ್ಚಿ ಅವರ ಪೀಠವು ಸೆಕ್ಯೂರಿಟೀಸ್ ಮೇಲ್ಮನವಿ ನ್ಯಾಯಮಂಡಳಿಯ ಮೇ 2,2025ರ ಆದೇಶವನ್ನು ಪ್ರಶ್ನಿಸಿದ್ದ ರಿಲಯನ್ಸ್ನ ಅರ್ಜಿಯನ್ನು ವಜಾಗೊಳಿಸಿತು. ಆರ್ಐಎಲ್ ಮಾಹಿತಿ ಬಹಿರಂಗವನ್ನು ವಿಳಂಬಿಸಿದೆ ಎಂಬ ಸೆಬಿ ಪ್ರತಿಪಾದನೆಯನ್ನು ನ್ಯಾಯಮಂಡಳಿಯು ದೃಢಪಡಿಸಿತ್ತು.
ಇಷ್ಟೊಂದು ದೊಡ್ಡ ಪ್ರಮಾಣದ ಒಪ್ಪಂದದ ಸುದ್ದಿಗಳು ಹೊರಹೊಮ್ಮಿದಾಗ ಅವು ಶೇರು ಬೆಲೆಗಳ ಮೇಲೆ ತೀವ್ರ ಪ್ರಭಾವವನ್ನು ಬೀರುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಹೀಗಿರುವಾಗ ಸಂಬಂಧಿಸಿದ ಕಂಪನಿಯು ಮೌನವಾಗಿರಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿತು.
ದೃಢಪಡಿಸದ ಮಾಧ್ಯಮ ವರದಿಗಳೂ ನಿಮ್ಮ ವ್ಯವಹಾರದ ಮೇಲೆ ಪರಿಣಾಮ ಬೀರಿದರೆ ಅಂತಹ ಮಾಹಿತಿಯನ್ನು ಬಹಿರಂಗಗೊಳಿಸಲು ನೀವು ಬದ್ಧರಾಗಿರುತ್ತೀರಿ ಎಂದು ವಿಚಾರಣೆ ವೇಳೆ ರಿಲಯನ್ಸ್ ಪರ ಹಿರಿಯ ವಕೀಲ ರಿತಿನ್ ರಾಯ್ ಗೆ ತಿಳಿಸಿದ ಪೀಠವು, ಇವು ನೈತಿಕ ಮೌಲ್ಯಗಳ ಅಂಶಗಳಾಗಿವೆ ಮತ್ತು ಇಂತಹ ವಿಷಯಗಳಲ್ಲಿ ಯಾವುದೇ ಉದಾರತೆ ಅಥವಾ ಸಡಿಲಿಕೆ ಇರಲು ಸಾಧ್ಯವಿಲ್ಲ. ನೀವು ದೊಡ್ಡ ಸಂಸ್ಥೆಯಾಗಿದ್ದರೆ ನಿಮ್ಮ ಹೊಣೆಗಾರಿಕೆಯೂ ದೊಡ್ಡದೇ ಆಗಿರುತ್ತದೆ. ನೀವು ಎಲ್ಲ ನಿಯಮಗಳನ್ನು ಎಚ್ಚರಿಕೆಯಿಂದ ಪಾಲಿಸಬೇಕು ಎಂದು ಹೇಳಿತು.
ಫೇಸ್ಬುಕ್ ಜಿಯೋ ಪ್ಲ್ಯಾಟ್ಫಾರ್ಮ್ಗಳಲ್ಲಿ ಶೇ.10ರಷ್ಟು ಪಾಲು ಬಂಡವಾಳವನ್ನು ಸ್ವಾಧೀನಪಡಿಸಿಕೊಳ್ಳುವ ಹಂತದಲ್ಲಿದೆ ಎಂದು ಮಾ.24,2020ರ ಫೈನಾನ್ಶಿಯಲ್ ಟೈಮ್ಸ್ ನಲ್ಲಿ ಪ್ರಕಟಗೊಂಡಿದ್ದ ವರದಿಯ ಸುತ್ತಲಿನ ಸಂದರ್ಭಗಳನ್ನು ನ್ಯಾಯಾಲಯವು ಗಮನಕ್ಕೆ ತೆಗೆದುಕೊಂಡಿತು. ದೇಶೀಯ ಮಾಧ್ಯಮಗಳು ಕೆಲವೇ ಗಂಟೆಗಳಲ್ಲಿ ಈ ಬೆಳವಣಿಗೆಗೆ ಹೆಚ್ಚಿನ ಪ್ರಚಾರವನ್ನು ನೀಡಿದ್ದವು ಮತ್ತು ಇದು ರಿಲಯನ್ಸ್ ನ ಶೇರು ಬೆಲೆಗಳಲ್ಲಿ ಶೇ.15ರಷ್ಟು ಜಿಗಿತಕ್ಕೆ ಕಾರಣವಾಗಿತ್ತು. ಆದರೂ ಕಂಪನಿಯು 2020,ಎ.22ರವರೆಗೂ ಸುದ್ದಿಯನ್ನು ದೃಢಪಡಿಸಿ ಅಥವಾ ನಿರಾಕರಿಸಿ ಯಾವುದೇ ಹೇಳಿಕೆಯನ್ನು ನೀಡಿರಲಿಲ್ಲ. ಎ.22ರಂದು ಅಂತಿಮ ಒಪ್ಪಂದವನ್ನು ಕಾರ್ಯಗತಗೊಳಿಸಲಾಗಿತ್ತು ಮತ್ತು ಔಪಚಾರಿಕವಾಗಿ ಪ್ರಕಟಿಸಲಾಗಿತ್ತು.ಇದು ಶೇರುಗಳ ಬೆಲೆಗಳು ಮತ್ತೆ ತೀವ್ರವಾಗಿ ಹೆಚ್ಚಲು ಕಾರಣವಾಗಿತ್ತು.
ಬೃಹತ್ ಹೂಡಿಕೆಯಾಗುತ್ತಿದೆ ಎಂಬ ಸುದ್ದಿ ಪ್ರಕಟವಾದ ತಕ್ಷಣ ಅದು ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ಗೊತ್ತಾದಾಗ ನೀವು ಜನರಿಗೆ ತಿಳಿಸಬೇಕಾಗಿತ್ತಲ್ಲವೇ ಎಂದು ಪೀಠವು ಪ್ರಶ್ನಿಸಿತು.
ಒಪ್ಪಂದವು ಇನ್ನೂ ಮಾತುಕತೆಗಳ ಹಂತದಲ್ಲಿತ್ತು,ಹೀಗಾಗಿ ಬಹಿರಂಗಪಡಿಸುವುದು ಅಗತ್ಯವಾಗಿರಲಿಲ್ಲ ಎಂಬ ರಾಯ್ ವಾದವನ್ನು ತಿರಸ್ಕರಿಸಿದ ಪೀಠವು,ಈ ಮಾಹಿತಿಯನ್ನೂ ನೀವು ನಿಡಬೇಕಿತ್ತು. ಮಾತುಕತೆಗಳು ಅಂತಿಮಗೊಂಡಿಲ್ಲ ಎಂದು ನೀವು ತಿಳಿಸಬಹುದಿತ್ತು. ನಿಮ್ಮ ಕಡೆಯಿಂದ ಅಧಿಕೃತವಾದ ಹೇಳಿಕೆಯು ಜನರಿಗೆ ವಿಷಯವನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತಿತ್ತು. ಮೌನವಾಗಿರಲು ನೀವು ಆಯ್ಕೆ ಮಾಡಿಕೊಂಡಿದ್ದೇ ಸ್ವತಃ ಒಂದು ಉಲ್ಲಂಘನೆಯಾಗಿದೆ ಎಂದು ಹೇಳಿತು.







