ಟಿಐಎಸ್ಎಸ್ನಿಂದ ಪಿಎಚ್ಡಿ ವಿದ್ಯಾರ್ಥಿಯ ಅಮಾನತು ಎತ್ತಿ ಹಿಡಿದ ಸುಪ್ರೀಂ ಕೋರ್ಟ್; ಮರುಪ್ರವೇಶಕ್ಕೆ ಅವಕಾಶ

TISS(PC: tiss.ac.in) , ಸುಪ್ರೀಂ ಕೋರ್ಟ್(PTI)
ಹೊಸದಿಲ್ಲಿ: ಮುಂಬೈನ ಟಾಟಾ ಸಮಾನ ವಿಜ್ಞಾನ ಸಂಸ್ಥೆ(ಟಿಐಎಸ್ಎಸ್)ಯು ಪುನರಾವರ್ತಿತ ದುರ್ನಡತೆ ಮತ್ತು ದೇಶವಿರೋಧಿ ಚಟುವಟಿಕೆಗಳ ಆರೋಪದಲ್ಲಿ ಪಿಎಚ್ಡಿ ವಿದ್ಯಾರ್ಥಿ ರಾಮದಾಸ ಪ್ರಿನಿ ಶಿವಾನಂದನ್ ಅವರನ್ನು ಅಮಾನತುಗೊಳಿಸಿದ್ದನ್ನು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಎತ್ತಿ ಹಿಡಿದಿದೆ.
ಆದಾಗ್ಯೂ ರಾಮದಾಸ ಅವರ ಎರಡು ವರ್ಷಗಳ ಅಮಾನತು ಅವಧಿಯನ್ನು ಅವರು ಶುಕ್ರವಾರದವರೆಗೆ ಈಗಾಗಲೇ ಅನುಭವಿಸಿರುವ ಅವಧಿಗೆ ಇಳಿಸಿದ ನ್ಯಾಯಮೂರ್ತಿಗಳಾದ ದೀಪಂಕರ ದತ್ತಾ ಮತ್ತು ಮನಮೋಹನ ಅವರ ಪೀಠವು, ಅವರಿಗೆ ಪಿಎಚ್ಡಿ ವ್ಯಾಸಂಗವನ್ನು ಮುಂದುವರಿಸಲು ಅವಕಾಶ ನೀಡುವಂತೆ ಸಂಸ್ಥೆಗೆ ನಿರ್ದೇಶನ ನೀಡಿದೆ.
ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ತನ್ನ ಫೇಸ್ಬುಕ್ ಪೋಸ್ಟ್ನಲ್ಲಿ ಸ್ವಾಗತಿಸಿರುವ ರಾಮದಾಸ,’ವಿದ್ಯಾರ್ಥಿಗೆ ಶಿಕ್ಷಣದ ನಿರಾಕರಣೆ ಕೇವಲ ವೈಯಕ್ತಿಕ ವಿಷಯವಲ್ಲ,ಅದು ಅಸಂಖ್ಯಾತ ವಿದ್ಯಾರ್ಥಿಗಳ ಮೂಲಭೂತ ಹಕ್ಕುಗಳು ಮತ್ತು ನಮ್ಮ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಕ್ಯಾಂಪಸ್ ಪ್ರಜಾಪ್ರಭುತ್ವದ ಪ್ರಶ್ನೆಯ ಮೇಲೆ ಪರಿಣಾಮ ಬೀರುತ್ತದೆ’ ಎಂದು ಹೇಳಿದ್ದಾರೆ.
‘ನನ್ನ ಶಿಕ್ಷಣ ಮತ್ತು ನನ್ನ ದೈನಂದಿನ ಜೀವನದ ಗಮನಾರ್ಹ ಸಮಯವನ್ನು ಕಸಿದುಕೊಂಡಿದ್ದರೂ ಈ ಅವಧಿಯು ಕಠಿಣ ಹೋರಾಟದ್ದಾಗಿತ್ತು. ನಾನು ಸಹ ಪ್ರತಿರೋಧದ ಒಂದು ಸಣ್ಣ ಭಾಗವಾಗಿರಲು ಸಾಧ್ಯವಾಗಿದ್ದು ನನಗೆ ಸಂತಸವನ್ನುಂಟು ಮಾಡಿದೆ’ ಎಂದು ರಾಮದಾಸ ಬರೆದಿದ್ದಾರೆ.
ಟಿಐಎಸ್ಎಸ್ ಎ.18,2024ರಂದು ರಾಮದಾಸರನ್ನು ತನ್ನ ಮುಂಬೈ ಕ್ಯಾಂಪಸ್ನಲ್ಲಿರುವ ಸ್ಕೂಲ್ ಆಫ್ ಡೆವಲಪ್ಮೆಂಟಲ್ ಸ್ಟಡೀಸ್ನಿಂದ ಎರಡು ವರ್ಷಗಳ ಅವಧಿಗೆ ಅಮಾನತುಗೊಳಿಸಿತ್ತು.
ರಾಮದಾಸ ಬಿಜೆಪಿ ಸರಕಾರದ ವಿರುದ್ಧ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದರಿಂದ ಅವರ ವಿರುದ್ಧ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಗತಿಪರ ವಿದ್ಯಾರ್ಥಿಗಳ ವೇದಿಕೆಯು ಅಮಾನತಿನ ಬಳಿಕ ಆರೋಪಿಸಿತ್ತು.
ರಾಮದಾಸ ಅವರ ಚಟುವಟಿಕೆಗಳನ್ನು,ವಿಶೇಷವಾಗಿ ಅವರು ಜನವರಿ 2024ರಲ್ಲಿ ದಿಲ್ಲಿಯಲ್ಲಿ ಸಂಸತ್ ಜಾಥಾದಲ್ಲಿ ಭಾಗವಹಿಸಿದ್ದನ್ನು ಆಕ್ಷೇಪಿಸಿ ಮತ್ತು ‘ರಾಮ್ ಕೆ ನಾಮ್’ ಸಾಕ್ಷ್ಯಚಿತ್ರವನ್ನು ವೀಕ್ಷಿಸುವಂತೆ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ವಿದ್ಯಾರ್ಥಿಗಳನ್ನು ಉತ್ತೇಜಿಸಿದ್ದನ್ನು ‘ದೇಶ ವಿರೋಧಿ ಕೃತ್ಯ’ಎಂದು ಪರಿಗಣಿಸಿ ಸಂಸ್ಥೆಯ ರಿಜಿಸ್ಟ್ರಾರ್ ಮಾರ್ಚ್ 2024ರಲ್ಲಿ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದರು.
ಅಯೋಧ್ಯೆಯಲ್ಲಿ ಹಿಂದಿನ ಬಾಬರಿ ಮಸೀದಿಯ ನಿವೇಶನದಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಹಿಂದುತ್ವ ಗುಂಪುಗಳ ಅಭಿಯಾನ ಕುರಿತ ‘ರಾಮ್ ಕೆ ನಾಮ್’ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ಸಾಕ್ಷ್ಯಚಿತ್ರವಾಗಿದ್ದು,1992ರಲ್ಲಿ ಆನಂದ ಪಟವರ್ಧನ ಅದನ್ನು ನಿರ್ಮಿಸಿದ್ದರು.
ರಾಮದಾಸ ಮೇ 2024ರಲ್ಲಿ ತನ್ನ ಅಮಾನತನ್ನು ಪ್ರಶ್ನಿಸಿ ಬಾಂಬೆ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅದು ಕಳೆದ ಮಾರ್ಚ್ನಲ್ಲಿ ಅರ್ಜಿಯನ್ನು ತಿರಸ್ಕರಿಸಿದ ಬಳಿಕ ಅವರು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು.







