ನಕಲಿ ವೆಬ್ಸೈಟ್, ಫಿಷಿಂಗ್ ದಾಳಿ ವಿರುದ್ಧ ಸುಪ್ರೀಂ ಕೋರ್ಟ್ ಎಚ್ಚರಿಕೆ

ಸುಪ್ರೀಂ ಕೋರ್ಟ್ | Photo : PTI
ಹೊಸದಿಲ್ಲಿ: ಅಮಾಯಕ ಬಳಕೆದಾರರಿಂದ ವೈಯಕ್ತಿಕ ಮತ್ತು ಗೌಪ್ಯ ಮಾಹಿತಿಗಳಿಗೆ ಗಾಳ ಹಾಕಲು ಪ್ರಯತ್ನಿಸುತ್ತಿರುವ ನಕಲಿ ಸುಪ್ರೀಂ ಕೋರ್ಟ್ ವೆಬ್ಸೈಟ್ ನ ಕುರಿತು ಸರ್ವೋಚ್ಚ ನ್ಯಾಯಾಲಯದ ರಿಜಿಸ್ಟ್ರಿಯು ಗುರುವಾರ ಸಾರ್ವಜನಿಕ ಹಿತಾಸಕ್ತಿಯಲ್ಲಿ ನೋಟಿಸನ್ನು ಹೊರಡಿಸಿದೆ.
ಇದು ‘ಫಿಷಿಂಗ್ ದಾಳಿ’ಯಾಗಿದೆ ಎಂದು ಅದು ಹೇಳಿದೆ.
ಸರ್ವೋಚ್ಚ ನ್ಯಾಯಾಲಯದ ಅಧಿಕೃತ ವೆಬ್ಸೈಟ್ ಅನ್ನು ಹೋಲುವ ನಕಲಿ ವೆಬ್ಸೈಟ್ ಅನ್ನು ಸೃಷ್ಟಿಸಲಾಗಿದೆ ಮತ್ತು ಎರಡು URLಗಳನ್ನು ಹೋಸ್ಟ್ ಮಾಡಲಾಗಿದೆ. ದಾಳಿಕೋರರು ವೈಯಕ್ತಿಕ ವಿವರಗಳು ಮತ್ತು ಗೌಪ್ಯ ಮಾಹಿತಿಗಳಿಗಾಗಿ ಗಾಳ ಹಾಕುತ್ತಿದ್ದಾರೆ. ಈ URLಗಳಿಗೆ ಭೇಟಿ ನೀಡುವ ಯಾರೇ ಆದರೂ ಯಾವುದೇ ವೈಯಕ್ತಿಕ ಮತ್ತು ಗೌಪ್ಯ ಮಾಹಿತಿಯನ್ನು ಹಂಚಿಕೊಳ್ಳದಂತೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಲಾಗಿದೆ. ಹಾಗೆ ಮಾಡುವುದರಿಂದ ದಾಳಿಕೋರರಿಗೆ ಮಾಹಿತಿಗಳನ್ನು ಕದಿಯಲು ಅನುಕೂಲವಾಗುತ್ತದೆ ಎಂದು ರಿಜಿಸ್ಟ್ರಿ ತನ್ನ ನೋಟಿಸ್ನಲ್ಲಿ ಎಚ್ಚರಿಕೆ ನೀಡಿದೆ.
ತಾವು ಸ್ವೀಕರಿಸುವ ಲಿಂಕ್ ಗಳನ್ನು ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಕ್ಲಿಕ್ಕಿಸದಂತೆ ಅಥವಾ ಹಂಚಿಕೊಳ್ಳದಂತೆ ಅದು ಸಾರ್ವಜನಿಕರಿಗೆ ತಿಳಿಸಿದೆ.
ಭಾರತದ ಸರ್ವೋಚ್ಚ ನ್ಯಾಯಾಲಯವು ಎಂದಿಗೂ ವೈಯಕ್ತಿಕ ಮಾಹಿತಿ,ಹಣಕಾಸು ವಿವರಗಳು ಅಥವಾ ಇತರ ಗೌಪ್ಯ ಮಾಹಿತಿಯನ್ನು ಕೇಳುವುದಿಲ್ಲ ಎಂದು ರಿಜಿಸ್ಟ್ರಿ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ಈ ಬಗ್ಗೆ ಕಾನೂನು ಜಾರಿ ಏಜೆನ್ಸಿಗಳಿಗೆ ತನ್ನ ಕಳವಳಗಳನ್ನು ತಿಳಿಸಿರುವ ರಿಜಿಸ್ಟ್ರಿಯು, ಫಿಷಿಂಗ್ ದಾಳಿಯ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದೆ.







