‘4ಪಿಎಮ್ ನ್ಯೂಸ್’ ಯೂಟ್ಯೂಬ್ ಚಾನೆಲ್‌ಗೆ ನಿಷೇಧ: ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಹೊಸದಿಲ್ಲಿ: ‘‘ರಾಷ್ಟ್ರೀಯ ಭದ್ರತೆ’’ಯ ಹೆಸರಿನಲ್ಲಿ ‘4ಪಿಎಮ್ ನ್ಯೂಸ್’ ಯೂಟ್ಯೂಬ್ ಚಾನೆಲನ್ನು ಬಂದ್ ಮಾಡಿರುವುದನ್ನು ಪ್ರಶ್ನಿಸಿ ಚಾನೆಲ್ ನಿರ್ವಾಹಕ ಸಂಜಯ್ ಶರ್ಮಾ ಸಲ್ಲಿಸಿರುವ ಅರ್ಜಿಯನ್ನು ಸೋಮವಾರ ವಿಚಾರಣೆಗೆ ಎತ್ತಿಕೊಂಡಿರುವ ಸುಪ್ರೀಂ ಕೋರ್ಟ್, ಈ ವಿಷಯದಲ್ಲಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಶರ್ಮಾ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ಚಾನೆಲನ್ನು ಬಂದ್ ಮಾಡುವ ಮುನ್ನ ಯಾವುದೇ ನೋಟಿಸ್ ನೀಡಲಾಗಿಲ್ಲ ಹಾಗೂ ಅದರ ಬಗ್ಗೆ ತನ್ನ ಕಕ್ಷಿದಾರನಿಗೆ ಓರ್ವ ಮಧ್ಯಸ್ಥಿಕೆದಾರನ ಮೂಲಕ ತಿಳಿಯಿತು ಎಂದು ನ್ಯಾಯಾಲಯದಲ್ಲಿ ಹೇಳಿದರು. ಈ ಕೃತ್ಯವು ‘‘ಮೇಲ್ನೋಟಕ್ಕೇ ಅಸಾಂವಿಧಾನಿಕವಾಗಿದೆ’’ ಎಂದು ಸಿಬಲ್ ಹೇಳಿದರು. ‘‘ಬಂದ್ ಮಾಡುವ ಆದೇಶವನ್ನು ರದ್ದುಪಡಿಸಬೇಕು ಎಂದು ನಾನು ಬಯಸುತ್ತೇನೆ. ಯಾವುದೇ ಕಾರಣವಿಲ್ಲದೆ ಇಡೀ ಚಾನೆಲನ್ನು ಬ್ಲಾಕ್ ಮಾಡಲಾಗಿದೆ’’ ಎಂದು ಅವರು ಹೇಳಿದರು.
ಬ್ಲಾಕಿಂಗ್ ನಿಯಮಗಳನ್ನು ಪ್ರಶ್ನಿಸುವ ಇನ್ನೊಂದು ಅರ್ಜಿಯ ಜೊತೆಗೆ ಈ ಅರ್ಜಿಯ ವಿಚಾರಣೆಯನ್ನು ನಡೆಸುವ ಇಂಗಿತವನ್ನು ಆರಂಭದಲ್ಲಿ ನ್ಯಾಯಮೂರ್ತಿಗಳಾದ ಬಿ. ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ನ್ಯಾಯಪೀಠ ವ್ಯಕ್ತಪಡಿಸಿತಾದರೂ, ಈ ವಿಷಯದಲ್ಲಿ ಮಧ್ಯಂತರ ಆದೇಶ ಅಗತ್ಯವಾಗಿದೆ ಎಂದು ಸಿಬಲ್ ವಾದಿಸಿದರು. ‘‘ಬ್ಲಾಕ್ ಮಾಡುವ ಆದೇಶ ಕೂಡ ನನ್ನಲ್ಲಿಲ್ಲ. ನನ್ನ ವಿರುದ್ಧ ಏನು ಆರೋಪವಿದೆ ಎನ್ನುವುದು ಕೂಡ ನನಗೆ ಗೊತ್ತಿಲ್ಲ’’ ಎಂದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಗವಾಯಿ, ‘‘ನಾವು ಎದುರು ಪಕ್ಷದ ವಾದವನ್ನೂ ಕೇಳಬೇಕಾಗುತ್ತದೆ’’ ಎಂದರು. ಬಳಿಕ, ಕೇಂದ್ರ ಸರಕಾರಕ್ಕೆ ನೋಟಿಸ್ ನೀಡುವಂತೆ ನ್ಯಾಯಾಲಯವು ನಿರ್ದೇಶನ ನೀಡಿತು.







