ಪೋಷಕರ ಅಕ್ರಮ ಬಂಧನದಲ್ಲಿದ್ದ ಮಹಿಳೆಯ ಬಿಡುಗಡೆಗೆ ʼಸುಪ್ರೀಂʼ ಆದೇಶ
ವಿಚಾರಣೆಯನ್ನು 14 ಬಾರಿ ಮುಂದೂಡಿದ್ದ ಕರ್ನಾಟಕ ಹೈಕೋರ್ಟ್ ಗೆ ತರಾಟೆ

ಸುಪ್ರೀಂ | Photo : PTI
ಹೊಸದಿಲ್ಲಿ : ತನ್ನ ಸ್ನೇಹಿತೆಯನ್ನು ಆಕೆಯ ಹೆತ್ತವರು ಅಕ್ರಮವಾಗಿ ಬಂಧದಲ್ಲಿರಿಸಿದ್ದಾರೆ ಎಂದು ಆರೋಪಿಸಿ ಕೇರಳ ಮೂಲದ ದುಬೈ ನಿವಾಸಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು 14 ಸಲ ಮುಂದೂಡಿದ್ದಕ್ಕಾಗಿ ಸರ್ವೋಚ್ಛ ನ್ಯಾಯಾಲಯವು ಕರ್ನಾಟಕ ಉಚ್ಛ ನ್ಯಾಯಾಲಯವನ್ನು ಬುಧವಾರ ತೀವ್ರ ತರಾಟೆಗೆತ್ತಿಕೊಂಡಿದೆ.
ಪ್ರಕರಣದ ವಿಚಾರಣೆಯು ಕೊನೆಯ ಬಾರಿ 2023, ಡಿ.1ರಂದು ನಡೆದಿತ್ತು. ಉಚ್ಛ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು 2025ಕ್ಕೆ ಅನಿರ್ದಿಷ್ಟವಾಗಿ ಮುಂದೂಡಿದ್ದು, ಇದರ ವಿರುದ್ಧವೂ ಕಿಡಿ ಕಾರಿರುವ ನ್ಯಾ.ಬಿ.ಆರ್.ಗವಾಯಿ ನೇತೃತ್ವದ ಪೀಠವು, 25ರ ಹರೆಯದ ಮಹಿಳೆಯನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆಕೆಯ ಹೆತ್ತವರಿಗೆ ಆದೇಶಿಸಿದೆ.
ಕೆವಿನ್ ಜಾಯ್ ವರ್ಗೀಸ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯವು ಈ ಆದೇಶವನ್ನು ಹೊರಡಿಸಿದೆ.
ಉಚ್ಛ ನ್ಯಾಯಾಲಯದ ಡಿಸೆಂಬರ್ ಆದೇಶದ ಬಳಿಕ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿದ್ದ ವರ್ಗೀಸ್, ತನ್ನ ಸ್ನೇಹಿತೆ ಮೀರಾ ಚಿದಂಬರಂ ಗಾಗಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು 2023 ಸೆಪ್ಟಂಬರ್ನಲ್ಲಿ ಸಲ್ಲಿಸಿದ್ದು,ಹೈಕೋರ್ಟ್ ಪ್ರಕರಣದಲ್ಲಿ ನೋಟಿಸನ್ನು ಸೆ.29ರಂದು ಹೊರಡಿಸಿತ್ತು ಎಂದು ತಿಳಿಸಿದ್ದರು.
ಪ್ರಕರಣದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದ ನಿಲುವಿನ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ನ್ಯಾ.ಗವಾಯಿ ಅವರ ಪೀಠವು,ವಿಶೇಷವಾಗಿ ಮಹಿಳೆಯು ದುಬೈಗೆ ಮರಳಿ ತನ್ನ ವೃತ್ತಿಜೀವನವನ್ನು ಮುಂದುವರಿಸುವ ಇಚ್ಛೆಯನ್ನು ಸ್ಪಷ್ಟವಾಗಿ ಪ್ರಕಟಿಸಿದ್ದಾಗ ಹೈಕೋರ್ಟ್ ಅರ್ಜಿಯ ಕುರಿತು ತಕ್ಷಣ ಕ್ರಮವನ್ನು ತೆಗೆದುಕೊಳ್ಳಬೇಕಿತ್ತು ಮತ್ತು ಆಕೆಯನ್ನು ಬಿಡುಗಡೆಗೊಳಿಸಬೇಕಿತ್ತು. ವಿಚಾರಣೆಯನ್ನು 14 ಸಲ ಮುಂದೂಡಿದ್ದು ಮತ್ತು ಈಗ 2025ನೇ ಸಾಲಿಗೆ ಅನಿರ್ದಿಷ್ಟವಾಗಿ ಮುಂದೂಡಿರುವುದು ಇಂತಹ ವಿಷಯಗಳಲ್ಲಿ ಕರ್ನಾಟಕ ಹೈಕೋರ್ಟ್ ಗೆ ಸಂವೇದನೆಯ ಸಂಪೂರ್ಣ ಕೊರತೆಯಿರುವುದನ್ನು ತೋರಿಸುತ್ತಿದೆ ಎಂದು ಹೇಳಿದೆ. ಸೂಕ್ತ ಸಮಯದಲ್ಲಿ ಸೂಕ್ತ ಆದೇಶವನ್ನು ಹೊರಡಿಸದಿದ್ದುದು ಮಹಿಳೆಯ ಅಕ್ರಮ ಬಂಧನ ಇನ್ನಷ್ಟು ಮುಂದುವರಿಯಲು ಅವಕಾಶ ನೀಡಿದೆ ಎಂದು ಸರ್ವೋಚ್ಛ ನ್ಯಾಯಾಲಯವು ಹೇಳಿದೆ.
ಹೈಕೋರ್ಟ್ ನ ಉದಾಸೀನ ಧೋರಣೆಯಿಂದಾಗಿ ಬಂಧಿತ ಮಹಿಳೆಯ ಯೋಗಕ್ಷೇಮವನ್ನು ಖಚಿತ ಪಡಿಸಿಕೊಳ್ಳಲೆಂದೇ ಅರ್ಜಿದಾರರು ಮತ್ತು ಅವರ ಹೆತ್ತವರು ಪದೇ ಪದೇ ದುಬೈನಿಂದ ಬೆಂಗಳೂರಿಗೆ ಪ್ರಯಾಣಿಸುವಂತಾಗಿತ್ತು ಎಂದು ಹೇಳಿರುವ ಸರ್ವೋಚ್ಛ ನ್ಯಾಯಾಲಯವು, ವ್ಯಕ್ತಿಯ ಸ್ವಾತಂತ್ರ್ಯದ ಪ್ರಶ್ನೆಯು ಒಳಗೊಂಡಿರುವಾಗ ಒಂದು ದಿನದ ವಿಳಂಬವೂ ತುಂಬ ದುಬಾರಿಯಾಗುತ್ತದೆ ಎಂದು ತಿಳಿಸಿದೆ.







