ಲಾಡ್ಕಿ ಬಹಿಣಾ ಯೋಜನೆಯಲ್ಲಿ 4,800 ಕೋಟಿ ರೂ. ವಂಚನೆ: ಸುಪ್ರಿಯಾ ಸುಳೆ ಆರೋಪ

ಸುಪ್ರಿಯಾ ಸುಳೆ | PTI
ಹೊಸದಿಲ್ಲಿ, ಜು. 29: ಬಿಜೆಪಿ ನೇತೃತ್ವದ ಮಹಾ ಯುತಿ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಮುಖ್ಯಮಂತ್ರಿ ಮಾಝಿ ಲಾಡ್ಕಿ ಬಹಿಣಾ ಯೋಜನೆಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದ ಬಳಿಕ ಎನ್ಸಿಪಿ (ಎಸ್ಪಿ) ಕಾರ್ಯಾಧ್ಯಕ್ಷೆ ಹಾಗೂ ಬಾರಾಮತಿ ಸಂಸದೆ ಸುಪ್ರಿಯಾ ಸುಳೆ, ಈ ಯೋಜನೆಯಲ್ಲಿ 4,800 ಕೋಟಿ ರೂ. ವಂಚನೆ ನಡೆದಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಈ ಬಗ್ಗೆ ವಿಶೇಷ ತನಿಖಾ ತಂಡ (ಎಸ್ಐಟಿ)ದಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಯೋಜನೆ ಅಡಿ ನೇರ ಫಲಾನುಭವಿ ವ್ಯವಸ್ಥೆಯ ಪಾರದರ್ಶಕತೆಯನ್ನು ಸುಳೆ ಅವರು ಪ್ರಶ್ನಿಸಿದ್ದಾರೆ. ಆರಂಭದಲ್ಲಿ ಅನುಮೋದನೆ ಪಡೆದ ಬಳಿಕ 26.34 ಲಕ್ಷ ಫಲಾನುಭವಿಗಳನ್ನು ಅನರ್ಹರು ಎಂದು ಘೋಷಿಸಲಾಯಿತು ಎಂದು ಅವರು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಮಹಿಳೆ ಹಾಗೂ ಮಕ್ಕಳ ಅಭಿವೃದ್ಧಿ ಸಚಿವೆ ಆದಿತಿ ತಟ್ಕೆರೆ, ಲಾಡ್ಕಿ ಬಹಿಣಾ ಯೋಜನೆಯಲ್ಲಿ 26.34 ಲಕ್ಷ ಜನರು ಅನರ್ಹರಾಗಿದ್ದಾರೆ. ಅವರಿಗೆ ಜೂನ್ ನ ಕಂತು ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದು ಹೇಳಿದ್ದರು.
2024 ವಿಧಾನ ಸಭಾ ಚುನಾವಣೆಗೆ ಮುನ್ನ ಬಿಜೆಪಿ ನೇತೃತ್ವದ ಸರಕಾರ ಲಾಡ್ಕಿ ಬಹಿಣಾ ಯೋಜನೆ ಆರಂಭಿಸಿತ್ತು. ಈ ಯೋಜನೆ ಮಹಾರಾಷ್ಟ್ರ ವಿಧಾನ ಸಭೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಅಭೂತಪೂರ್ವ ಜಯ ಗಳಿಸಲು ಕಾರಣವಾಯಿತು.





