ಹಿರಿಯ ಮಹಿಳೆಯೊಂದಿಗೆ ಅಸಂಬದ್ದ ಮಾತು: ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ ಕೇಂದ್ರ ಸಚಿವ ಸುರೇಶ್ ಗೋಪಿ

ಸುರೇಶ್ ಗೋಪಿ | PC : PTI
ತ್ರಿಶೂರ್: ಕೇಂದ್ರ ಸಚಿವ ಸುರೇಶ್ ಗೋಪಿ ಅವರು ತನ್ನ ಲೋಕಸಭಾ ಕ್ಷೇತ್ರದಲ್ಲಿ ಬುಧವಾರ ಜನರ ಭೇಟಿ ಕಾರ್ಯಕ್ರಮದ ಸಂದರ್ಭ ಹಿರಿಯ ಮಹಿಳೆಯೊಂದಿಗೆ ಅಸಂಬದ್ದವಾಗಿ ಮಾತನಾಡುವ ಮೂಲಕ ಇನ್ನೊಂದು ವಿವಾದಕ್ಕೆ ಸಿಲುಕಿದ್ದಾರೆ.
ಮನೆ ನಿರ್ಮಾಣ ಮಾಡಲು ನೆರವು ನೀಡುವಂತೆ ಕೋರಿ ವೃದ್ಧರೋರ್ವರು ನೀಡಿದ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿರುವುದಕ್ಕೆ ಸುರೇಶ್ ಗೋಪಿ ಈ ಹಿಂದೆ ವ್ಯಾಪಕ ಟೀಕೆಗೆ ಒಳಗಾಗಿದ್ದರು. ಅನಂತರ, ಈಡೇರಿಸಲಾಗದ ಭರವಸೆಯನ್ನು ನಾವು ಯಾವತ್ತೂ ನೀಡಿಲ್ಲ ಎಂದು ಸಮರ್ಥಿಸಿಕೊಂಡಿದ್ದರು.
ಬುಧವಾರ ಹಿರಿಯ ಮಹಿಳೆ ಆನಂದವಲ್ಲಿ ಅವರು ಜಿಲ್ಲೆಯಲ್ಲಿ ಸಿಪಿಐ (ಎಂ) ನಾಯಕರು ಭಾಗಿಯಾಗಿರುವ ಹಗರಣದಲ್ಲಿ ಸಿಲುಕಿರುವ ಕರುವನ್ನೂರು ಸರ್ವೀಸ್ ಕೋ-ಆಪರೇಟಿವ್ ಬ್ಯಾಂಕ್ನಲ್ಲಿ ಠೇವಣಿ ಇರಿಸಲಾದ ತಾನು ಠೇವಣಿ ಇರಿಸಿದ ಹಣವನ್ನು ಹಿಂದೆ ಪಡೆಯಲು ಸಹಾಯ ಮಾಡಲು ಸಾಧ್ಯವೇ ಎಂದು ಅವರನ್ನು ಕೇಳಿದ್ದರು. ಹಲವು ಜನರು ಠೇವಣಿ ಕಳೆದುಕೊಂಡ ಈ ಪ್ರಕರಣವನ್ನು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.
ಮಹಿಳೆಯ ಮನವಿಗೆ ಪ್ರತಿಕ್ರಿಯೆ ನೀಡಿದ ಸುರೇಶ್ ಗೋಪಿ, ಹಗರಣದಲ್ಲಿ ಹಲವು ವ್ಯಕ್ತಿಗಳ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡ ಜಾರಿ ನಿರ್ದೇಶಾಲಯದಿಂದ ಹಣ ಪಡೆದುಕೊಳ್ಳಲು ಮುಖ್ಯಮಂತ್ರಿ ಅವರನ್ನು ಸಂಪರ್ಕಿಸಬೇಕು ಎಂದು ಹೇಳಿದ್ದರು.
‘‘ನೀವು ಹೆಚ್ಚು ಮಾತನಾಡಬಾರದು. ನಿಮ್ಮ ಶಾಸಕರು ಅಥವಾ ಸಚಿವರನ್ನು ಕೇಳಿ ಅಥವಾ ಮುಖ್ಯಮಂತ್ರಿ ಅವರನ್ನು ಸಂಪರ್ಕಿಸಿ’’ ಎಂದು ಸುರೇಶ್ ಗೋಪಿಗೆ ವೃದ್ಧೆಗೆ ಹೇಳಿದ್ದರು.
ಆಗ ಮಹಿಳೆ ನನಗೆ ಮುಖ್ಯಮಂತ್ರಿ ಅವರನ್ನು ಹೇಗೆ ಸಂಪರ್ಕಿಸುವುದು ಎಂದು ತಿಳಿದಿಲ್ಲ ಎಂದು ಹೇಳಿದರು. ಅದಕ್ಕೆ ಸುರೇಶ್ ಗೋಪಿ, ‘‘ಅನಂತರ ನೀವು ನನ್ನ ಮೇಲೆ ಆಪಾದನೆಯನ್ನು ಹೊರಿಸುತ್ತೀರಿ’’ ಎಂದು ಹೇಳುವ ವೀಡಿಯೊ ಸಾಮಾಜಿಕ ಮಾದ್ಯಮದಲ್ಲಿ ಕಂಡು ಬಂದಿದೆ.
ಆಗ ವೃದ್ದೆ ನೀವು ಕೂಡ ನಮ್ಮ ಸಚಿವರಲ್ಲವೇ ಎಂದು ಹೇಳಿದ ಬಳಿಕ, ಸುರೇಶ್ ಗೋಪಿ, ತಾನು ದೇಶದ ಸಚಿವ ಎಂದು ಪ್ರತ್ಯುತ್ತರ ನೀಡಿದ್ದಾರೆ.
ಕೇಂದ್ರ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅನಂದವಲ್ಲಿ, ಸಚಿವರಾಗಿ ಬದಲಾಗಿರುವ ನಟನ ಬಾಯಲ್ಲಿ ಇಂತಹ ಪದಗಳನ್ನು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ ಎಂದು ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
‘‘ನಾನು ಅವರನ್ನು ಚಲನಚಿತ್ರಗಳಲ್ಲಿ ನೋಡಿದ್ದೆ. ಅವರಿಂದ ದಯೆಯ ಮಾತುಗಳನ್ನು ನಿರೀಕ್ಷಿಸಿದ್ದೆ. ನನ್ನ ಮನವಿಯನ್ನು ಪರಿಗಣಿಸಲಾಗುವುದು ಎಂದು ಅವರು ಕೇವಲ ಹೇಳಿದ್ದರೆ ಸಾಕಾಗುತ್ತಿತ್ತು’’ ಎಂದು ಅವರು ತಿಳಿಸಿದ್ದಾರೆ.
ಕರುವನ್ನೂರು ಬ್ಯಾಂಕ್ನ ಎಲ್ಲಾ ಠೇವಣಿದಾರರು ಅವರ ಹಣವನ್ನು ಹಿಂದೆ ಪಡೆಯಲಿದ್ದಾರೆ ಎಂದು ಸುರೇಶ್ ಗೋಪಿ ಅವರು ಚುನಾವಣಾ ಪ್ರಚಾರದ ಸಂದರ್ಭ ಭರವಸೆ ನೀಡಿದ್ದರು ಎಂದು ಕೂಡ ಅನಂದವಲ್ಲಿ ಹೇಳಿದ್ದಾರೆ.







