ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವಾಗ ʼಮಾಟಮಂತ್ರʼ ನಡೆಸಿ ಸಿಕ್ಕಿಬಿದ್ದ ಸರ್ಜನ್!

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಸರಕಾರಿ ನೌಕರನಿಗೆ ಉದ್ದೇಶಪೂರ್ವಕವಾಗಿ ಅವಮಾನಿಸಿದ್ದಕ್ಕಾಗಿ ಮತ್ತು ‘ಮಾಟಮಂತ್ರ’ದಲ್ಲಿ ತೊಡಗಿ ನ್ಯಾಯಾಲಯದ ಕಲಾಪಗಳಿಗೆ ಅಡ್ಡಿಯನ್ನುಂಟು ಮಾಡಿದ್ದಕ್ಕಾಗಿ ಸರ್ಜನ್ (ಶಸ್ತ್ರಚಿಕಿತ್ಸಕ) ಓರ್ವರನ್ನು ತಪ್ಪಿತಸ್ಥ ಎಂದು ಘೋಷಿಸಿದ ದಿಲ್ಲಿ ನ್ಯಾಯಾಲಯವು ಅವರು ಕ್ಷಮೆಯಾಚಿಸಿ ತನ್ನ ಕೃತ್ಯಕ್ಕಾಗಿ ಪಶ್ಚಾತ್ತಾಪ ವ್ಯಕ್ತಪಡಿಸಿದ ಬಳಿಕ ದಿನದ ಕಲಾಪಗಳು ಅಂತ್ಯಗೊಳ್ಳುವವರೆಗೆ ಜೈಲುಶಿಕ್ಷೆಯನ್ನು ವಿಧಿಸಿದ್ದು ವರದಿಯಾಗಿದೆ.
ವೃತ್ತಿಯಲ್ಲಿ ಸರ್ಜನ್, ವಿದ್ಯಾವಂತ ಮತ್ತು ಕುಲೀನ ವರ್ಗಕ್ಕೆ ಸೇರಿದವರು ಎನ್ನಲಾಗಿರುವ ಆರೋಪಿ ಡಾ.ಚಂದರ್ ವಿಭಾಸ್ ಇಂತಹ ಅಸಮಂಜಸ ರೀತಿಯಲ್ಲಿ ವರ್ತಿಸಿದ್ದು ಮತ್ತು ನ್ಯಾಯಾಲಯದ ಕಲಾಪಗಳಿಗೆ ಅಡ್ಡಿಯನ್ನುಂಟು ಮಾಡಿದ್ದು ಆಘಾತವನ್ನುಂಟು ಮಾಡಿದೆ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಶೆಫಾಲಿ ಬರ್ನಾಲಾ ಟಂಡನ್ ಹೇಳಿದರು.
ಆ.11ರಂದು ವಿಚಾರಣೆಯ ಸಂದರ್ಭದಲ್ಲಿ ಆರೋಪಿಯು ವೇದಿಕೆಯ ಕೆಳಗೆ ಅಕ್ಕಿ ಚೆಲ್ಲಿರುವುದಾಗಿ ಸಿಬ್ಬಂದಿಗಳು ನ್ಯಾಯಾಲಯಕ್ಕೆ ತಿಳಿಸಿದ್ದರು. ಇದು ವಕೀಲರು ಸೇರಿದಂತೆ ಅಲ್ಲಿದ್ದವರಲ್ಲಿ ಆತಂಕ ಸೃಷ್ಟಿಸಿದ್ದು,‘ವಾಮಾಚಾರ’ ಎಂದು ಶಂಕಿಸಿದ್ದರು.
ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ತನ್ನ ಕೈಯಲ್ಲಿ ಸ್ಪಲ್ಪ ಅಕ್ಕಿಯಿತ್ತು ಮತ್ತು ಅದು ಈಗಷ್ಟೇ ನೆಲದ ಮೇಲೆ ಬಿದ್ದಿದೆ ಎಂದು ಸಮಜಾಯಿಷಿ ನೀಡಿದ್ದರು. ಆದರೆ ನ್ಯಾಯಾಲಯಕ್ಕೆ ಬರುವಾಗ ಮತ್ತು ವಿಚಾರಣೆ ಸಂದರ್ಭದಲ್ಲಿ ಅಕ್ಕಿಯನ್ನೇಕೆ ಕೈಯಲ್ಲಿಟ್ಟುಕೊಂಡಿದ್ದೆ ಎನ್ನುವುದನ್ನು ವಿವರಿಸಲು ಅವರು ವಿಫಲಗೊಂಡಿದ್ದರು.’
ನ್ಯಾಯಾಲಯದ ಕಲಾಪಗಳಿಗೆ 15-20 ನಿಮಿಷಗಳ ಕಾಲ ಅಡ್ಡಿಯನ್ನುಂಟು ಮಾಡಿದ್ದಕ್ಕಾಗಿ ಡಾ.ವಿಭಾಸ್ ವಿರುದ್ಧ ಬಿಎನ್ಎಸ್ ಕಲಂ 267ರಡಿ ಅಪರಾಧವನ್ನು ಗಮನಕ್ಕೆ ತೆಗೆದುಕೊಳ್ಳುವಂತೆ ವಕೀಲರು ನ್ಯಾ.ಟಂಡನ್ರನ್ನು ಆಗ್ರಹಿಸಿದರು.
ನ್ಯಾಯಾಲಯವು ನ್ಯಾಯದಾನದ ಸ್ಥಳವಾಗಿದೆ ಮತ್ತು ಅದರ ಘನತೆಯನ್ನು ಕಾಯ್ದುಕೊಳ್ಳುವುದು ಕಾನೂನಿನ ನಿಯಮಕ್ಕೆ ಅತ್ಯಗತ್ಯವಾಗಿದೆ. ನ್ಯಾಯಾಲಯಕ್ಕೆ ಅಗೌರವ ಅಥವಾ ನ್ಯಾಯಾಂಗ ಪ್ರಕ್ರಿಯೆಗಳಿಗೆ ಅಡ್ಡಿಯನ್ನುಂಟು ಮಾಡುವುದು ಸಾರ್ವಜನಿಕರಿಗೆ ಹಾನಿಕಾರಕ ಸಂದೇಶವನ್ನು ರವಾನಿಸುತ್ತದೆ ಎಂದು ನ್ಯಾಯಾಲಯವು ಹೇಳಿತು.
ಡಾ.ವಿಭಾಸ್ ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆಯನ್ನು ಯಾಚಿಸಿದ ಬಳಿಕ ನ್ಯಾಯಾಲಯವು ಅವರಿಗೆ ದಿನದ ಕಲಾಪಗಳು ಮುಗಿಯುವವರೆಗೆ ಶಿಕ್ಷೆ ಮತ್ತು 2,000 ರೂ.ಗಳ ದಂಡವನ್ನು ವಿಧಿಸಿತು.







