ತಾತ್ಕಾಲಿಕ ಹಿನ್ನಡೆಗಳನ್ನು ಮೆಟ್ಟಿ ನಿಲ್ಲುತ್ತೇವೆ: ಮೂರು ರಾಜ್ಯಗಳಲ್ಲಿ ಸೋಲಿಗೆ ಖರ್ಗೆ ಪ್ರತಿಕ್ರಿಯೆ

ಮಲ್ಲಿಕಾರ್ಜುನ ಖರ್ಗೆ | Photo: @INCIndia \ X
ಹೊಸದಿಲ್ಲಿ: ರವಿವಾರ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳು ಪ್ರಕಟಗೊಂಡ ನಾಲ್ಕು ರಾಜ್ಯಗಳ ಜನರಿಗೆ ಧನ್ಯವಾದಗಳನ್ನು ಸಲ್ಲಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ‘ನಾವು ಹಿನ್ನಡೆಗಳನ್ನು ಮೆಟ್ಟಿ ನಿಲ್ಲುತ್ತೇವೆ ಮತ್ತು ಲೋಕಸಭಾ ಚುನಾವಣೆಗೆ ಸಿದ್ಧರಾಗುತ್ತಿದ್ದೇವೆ’ ಎಂದು ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ. ತೆಲಂಗಾಣದಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಮಧ್ಯಪ್ರದೇಶ,ರಾಜಸ್ಥಾನ ಮತ್ತು ಛತ್ತೀಸ್ಗಡದಲ್ಲಿ ಬಿಜೆಪಿಯಿಂದ ಪರಾಭವಗೊಂಡಿದೆ.
ಛತ್ತೀಸ್ಗಡ ಮತ್ತು ರಾಜಸ್ಥಾನಗಳಲ್ಲಿ ಅಧಿಕಾರವನ್ನು ಉಳಿಸಿಕೊಳ್ಳುವ ಮತ್ತು 2020ರಲ್ಲಿ ಜ್ಯೋತಿರಾದಿತ್ಯ ಸಿಂದಿಯಾರ ಪಕ್ಷಾಂತರದಿಂದಾಗಿ ಬಿಜೆಪಿಗೆ ಅಧಿಕಾರ ಬಿಟ್ಟುಕೊಟ್ಟಿದ್ದ ಮಧ್ಯಪ್ರದೇಶದಲ್ಲಿ ಮತ್ತೆ ಗದ್ದುಗೆಯನ್ನೇರುವ ಭರವಸೆಯನ್ನು ಕಾಂಗ್ರೆಸ್ ಹೊಂದಿತ್ತು. ಆದರೆ ರವಿವಾರ ನಡೆದ ಮತ ಎಣಿಕೆಯಲ್ಲಿ ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಆರಂಭದಿಂದಲೇ ಬಿಜೆಪಿಗೆ ಮುನ್ನಡೆಯನ್ನು ಬಿಟ್ಟುಕೊಟ್ಟಿದ್ದ ಕಾಂಗ್ರೆಸ್ ಛತ್ತೀಸ್ಗಡದಲ್ಲಿ ಆರಂಭದಲ್ಲಿ ಮೇಲುಗೈ ಸಾಧಿಸಿತ್ತಾದರೂ ಕ್ರಮೇಣ ಬಿಜೆಪಿ ಅದನ್ನೂ ಕಿತ್ತುಕೊಂಡಿತ್ತು.
ತೆಲಂಗಾಣದಲ್ಲಿ ಮಾತ್ರ ಕಾಂಗ್ರೆಸ್ ಯಶಸ್ವಿಯಾಗಿದೆ. ಕಳೆದ ಒಂದು ದಶಕದಿಂದಲೂ ಅಧಿಕಾರದಲ್ಲಿದ್ದ ಕೆ.ಚಂದ್ರಶೇಖರ ರಾವ್ ಅವರ BRS ಅನ್ನು ಗದ್ದುಗೆಯಿಂದ ಕೆಳಕ್ಕಿಳಿಸಿದೆ.
‘ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿರುವ ತೆಲಂಗಾಣ ಜನತೆಗೆ ನನ್ನ ಧನ್ಯವಾದಗಳು. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಡಗಳಲ್ಲಿ ನಮಗೆ ಮತ ನೀಡಿದ ಎಲ್ಲರಿಗೂ ಧನ್ಯವಾದಗಳು’ ಎಂದು ಎಕ್ಸ್ ಪೋಸ್ಟ್ ನಲ್ಲಿ ಹೇಳಿರುವ ಖರ್ಗೆ, ಈ ಮೂರು ರಾಜ್ಯಗಳಲ್ಲಿ ನಮ್ಮ ಸಾಧನೆಯು ನಿಸ್ಸಂಶಯವಾಗಿ ನಿರಾಶಾದಾಯಕವಾಗಿದೆ. ಈ ರಾಜ್ಯಗಳಲ್ಲಿ ನಮ್ಮನ್ನು ಪುನರ್ನಿರ್ಮಿಸಿಕೊಳ್ಳುವ ಮತ್ತು ಪುನರುಜ್ಜೀವಿಸುವ ನಮ್ಮ ಸಂಕಲ್ಪವನ್ನು ನಾವು ಮತ್ತೊಮ್ಮೆ ದೃಢಪಡಿಸುತ್ತೇವೆ’ ಎಂದಿದ್ದಾರೆ.
‘ನಾವು ತಾತ್ಕಾಲಿಕ ಹಿನ್ನಡೆಗಳನ್ನು ಮೆಟ್ಟಿ ನಿಲ್ಲುತ್ತೇವೆ ಮತ್ತು ಇಂಡಿಯಾ ಮೈತ್ರಿಕೂಟದ ಪಕ್ಷಗಳೊಂದಿಗೆ ಮುಂಬರುವ ಲೋಕಸಭಾ ಚುನಾವಣೆಗಾಗಿ ಸಂಪೂರ್ಣ ಸಿದ್ಧರಾಗುತ್ತೇವೆ’ ಎಂದೂ ಖರ್ಗೆ ಬರೆದಿದ್ದಾರೆ.
ಇಂಡಿಯಾ ಮೈತ್ರಿಕೂಟದ ಕೆಲವು ಪಕ್ಷಗಳು ಈಗಾಗಲೇ ಕಾಂಗ್ರೆಸ್ ಕುರಿತು ನಕಾರಾತ್ಮಕ ಪ್ರತಿಕ್ರಿಯೆಗಳನ್ನು ನೀಡಿವೆ.
ಕಾಂಗ್ರೆಸ್ ದೊಡ್ಡಣ್ಣನ ಮನೋಭಾವವನ್ನು ಹೊಂದಿದೆ ಎಂದು ಆರೋಪಿಸಿರುವ ಟಿಎಂಸಿ, ಆತ್ಮಾವಲೋಕನ ಮಾಡಿಕೊಳ್ಳುವಂತೆ ಅದಕ್ಕೆ ಕರೆ ನೀಡಿದೆ.
ಇದು ಬಿಜೆಪಿಯ ಯಶಸ್ಸಲ್ಲ, ಇದು ಕಾಂಗ್ರೆಸ್ ನ ಸಂಪೂರ್ಣ ವೈಫಲ್ಯ ಎಂದು ಹೇಳಿದ ಟಿಎಂಸಿ ವಕ್ತಾರ ಕುನಾಲ ಘೋಷ್, ಕಾಂಗ್ರೆಸ್ ತನ್ನ ‘ಜಮೀನ್ದಾರಿ ಮನಃಸ್ಥಿತಿ’ಯಿಂದ ಹೊರಗೆ ಬರಬೇಕು ಹಾಗೂ ಮಮತಾ ಬ್ಯಾನರ್ಜಿಯವರಂತಹ ಹಿರಿಯ ನಾಯಕರ ಅನುಭವವನ್ನು ಹಂಚಿಕೊಳ್ಳಬೇಕು ಮತ್ತು ಅನುಷ್ಠಾನಿಸಬೇಕು ಎಂದರು.
ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಗೆ ಸಾಧ್ಯವಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಈ ದುಃಸ್ಥಿತಿಯಿಂದ ಅದು ಹೊರಕ್ಕೆ ಬರಲೇಬೇಕು ಎಂದು ಹೇಳಿದ ಹಿರಿಯ ಜೆಡಿಯು ನಾಯಕ ಕೆ.ಸಿ.ತ್ಯಾಗಿ ಅವರು, ಕಾಂಗ್ರೆಸ್ ಈಗಾಗಲೇ ಇಂಡಿಯಾ ಮೈತ್ರಿಕೂಟದ ಘಟಕ ಪಕ್ಷಗಳಿಂದ ಸಾಕಷ್ಟು ದೂರ ಸರಿದಿದೆ ಎಂದರು. ಕಾಂಗ್ರೆಸ್ ಪಕ್ಷವು ಡಿ.6ರಂದು ಕರೆದಿರುವ ಮೈತ್ರಿಕೂಟದ ಸಭೆಯನ್ನು ವ್ಯಂಗ್ಯವಾಡಿದ ಅವರು, ಬೆಳೆಗಳು ಒಣಗಿರುವಾಗ ಮಳೆ ಬಂದರೇನು ಉಪಯೋಗ ಎಂದರು.







