ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಸೂರ್ಯಕಾಂತ್ ನೇಮಕ : ನ.24ರಂದು ಅಧಿಕಾರ ಸ್ವೀಕಾರ

ನ್ಯಾಯಮೂರ್ತಿ ಸೂರ್ಯಕಾಂತ್ | Photo Credit : PTI
ಹೊಸದಿಲ್ಲಿ,ಅ.30: ಭಾರತದ ಮುಖ್ಯ ನ್ಯಾಯಮೂರ್ತಿ(ಸಿಜೆಐ)ಯಾಗಿ ಸೂರ್ಯಕಾಂತ್ ಅವರು ಗುರುವಾರ ನೇಮಕಗೊಂಡಿದ್ದಾರೆ.
ಹಾಲಿ ಸಿಜೆಐ ಬಿ.ಆರ್.ಗವಾಯಿ ಅವರು ತನ್ನ ಉತ್ತರಾಧಿಕಾರಿಯಾಗಿ ಸುಪ್ರೀಂಕೋರ್ಟ್ ಅತ್ಯಂತ ಹಿರಿಯ ನ್ಯಾಯಮೂರ್ತಿಯಾದ 63 ವರ್ಷ ವಯಸ್ಸಿನ ಸೂರ್ಯಕಾಂತ್ ಅವರ ಹೆಸರನ್ನು ಸೋಮವಾರ ಶಿಫಾರಸು ಮಾಡಿದ್ದರು.
ಗವಾಯಿ ಅವರ ಅಧಿಕಾರಾವಧಿ ನವೆಂಬರ್ 23ರಂದು ಕೊನೆಗೊಳ್ಳಲಿದ್ದು, ಸೂರ್ಯಕಾಂತ್ ಅವರು ನವೆಂಬರ್ 24ರಂದು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಸೂರ್ಯಕಾಂತ್ ಅವರ ಅಧಿಕಾರಾವಧಿ 2027ರ ಫೆಬ್ರವರಿ 9ರವರೆಗೂ ಇರುವುದು. ಭಾರತದ ಮೊದಲ ಸಿಜೆಐ ಹುದ್ದೆಗೇರಿದ ಮೊದಲ ಸಿಜೆಐ ಎಂಬ ಹೆಗ್ಗಳಿಕೆಗೆ ಸೂರ್ಯಕಾಂತ್ ಪಾತ್ರರಾಗಿದ್ದಾರೆ.
ಅವರು 2019ರ ಮೇ 24ರಂದು ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಯಾಗಿ ಭಡ್ತಿಗೊಂಡಿದ್ದರು.
1962ರಲ್ಲಿ ಹರ್ಯಾಣದ ಹಿಸ್ಸಾರ್ನಲ್ಲಿ ಜನಿಸಿದ ಅವರು 1984ರಲ್ಲಿ ರೋಹ್ಟಕ್ನ ಮಹರ್ಷಿ ದಯಾನಂದ ವಿವಿಯಲ್ಲಿ ಕಾನೂನು ಪದವಿ ಪಡೆದಿದ್ದರು. ಪಂಜಾಬ್, ಹರ್ಯಾಣದ ಹೈಕೋರ್ಟ್ನಲ್ಲಿ ವಕೀಲಿ ವೃತ್ತಿ ನಡೆಸಿದ ಅವರು ಜುಲೈ 7ರಂದು ಹರ್ಯಾಣದ ಅತ್ಯಂತ ಕಿರಿಯ ವಯಸ್ಸಿನ ಅಡ್ವೋಕೇಟ್ ಜನರಲ್ ಆಗಿ ನೇಮಕಗೊಂಡಿದ್ದರು.
2018ರ ಆಕ್ಟೋಬರ್ 5ರಂದು ಅವರು ಹಿಮಾಚಲ ಪ್ರದೇಶ ಹೈಕೋರ್ಟ್ನ ಮುಖ್ಯನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದರು.
ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ಒದಗಿಸುವ ಸಂವಿಧಾನದ 370ನೇ ವಿಧಿಯ ರದ್ದತಿಯನ್ನು ಎತ್ತಿಹಿಡಿದ ನ್ಯಾಯಪೀಠದ ಸದಸ್ಯರಾಗಿದ್ದರು. ಚುನಾವಣಾಬಾಂಡ್ ರದ್ದು, ಸಶಸ್ತ್ರ ಪಡೆಗಳಿಗೆ ಒಂದು ದರ್ಜೆ ಒಂದು ಪಿಂಚಣಿ (ಓಆರ್ಓಪಿ) ತೀರ್ಪು ನೀಡಿದ ಪೀಠದಲ್ಲೂ ಅವರು ಸದಸ್ಯರಾಗಿದ್ದರು.







