ಸುಳ್ಳು ಮಾಹಿತಿಯೊಂದಿಗೆ ಇಬ್ಬರು ಕಾಶ್ಮೀರಿಗಳ ವಿಳಾಸಗಳನ್ನು ಎಕ್ಸ್ ನಲ್ಲಿ ಹಂಚಿಕೊಂಡ ಬಿಜೆಪಿ ಶಾಸಕ ಸುವೇಂದು ಅಧಿಕಾರಿ
►ಕಾಶ್ಮೀರಿಗಳು ತಮ್ಮ ಮನೆಯ ಮೇಲ್ಚಾವಣಿ ಮೇಲೆ ವೈರ್ ಲೆಸ್ ನೆಟ್ವರ್ಕ್ ಬ್ರಿಡ್ಜ್ ಸ್ಥಾಪಿಸಿಕೊಂಡಿದ್ದಾರೆ ಎಂದು ಆರೋಪ ►ಜಿಯೊ ಫೈಬರ್ ಪ್ಲಸ್ ಸಾಧನ ಅಳವಡಿಸಿಕೊಂಡಿದ್ದಕ್ಕೆ ಸುಳ್ಳು ಆರೋಪಕ್ಕೀಡಾದ ಕಾಶ್ಮೀರಿಗಳು

Screengrab from the video | X
ಕೋಲ್ಕತ್ತಾ: ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ವಾಸಿಸುತ್ತಿರುವ ಇಬ್ಬರು ಕಾಶ್ಮೀರಿ ನಿವಾಸಿಗಳ ಪೂರ್ಣ ವಿಳಾಸವನ್ನು ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹಾಗೂ ನಂದಿ ಗ್ರಾಮ ವಿಧಾನಸಭಾ ಕ್ಷೇತ್ರದ ಶಾಸಕ ಸುವೇಂದು ಅಧಿಕಾರಿ ಸಾರ್ವಜನಿಕವಾಗಿ ಹಂಚಿಕೊಂಡಿದ್ದು, ಅವರ ಈ ವರ್ತನೆ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇದರೊಂದಿಗೆ ಇಬ್ಬರು ಕಾಶ್ಮೀರಿ ನಿವಾಸಿಗಳ ಸುರಕ್ಷತೆ ಹಾಗೂ ಖಾಸಗಿತನದ ಬಗೆಗೂ ಗಂಭೀರ ಕಳವಳ ವ್ಯಕ್ತವಾಗಿದೆ.
ಈ ಕುರಿತು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಸುವೇಂದು ಅಧಿಕಾರಿ, ಇಬ್ಬರು ಕಾಶ್ಮೀರಿ ಪ್ರಜೆಗಳು ಬರುಯಿಪುರ್ ನ ಕೆ.ಎಂ. ರಾಯ್ ಚೌಧರಿ ರಸ್ತೆಯಲ್ಲಿರುವ ನಿರಂಜನ್ ಅಪಾರ್ಟ್ ಮೆಂಟ್ ನ ಫ್ಲ್ಯಾಟ್ ಒಂದರಲ್ಲಿ ವಾಸಿಸುತ್ತಿದ್ದು, ಅವರು ತಮ್ಮ ಮೇಲ್ಚಾವಣಿಯ ಮೇಲೆ ‘ನ್ಯಾನೊಬೀಮ್ 2ಎಸಿ’ ವೈರ್ ಲೆಸ್ ನೆಟ್ ವರ್ಕ್ ಬ್ರಿಡ್ಜ್ ಅನ್ನು ಅಳವಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಆ ಮೂಲಕ, ಆ ಇಬ್ಬರು ಕಾಶ್ಮೀರಿ ಪ್ರಜೆಗಳು ಸಂಶಯಾಸ್ಪದ ಚಟುವಟಿಕೆಗಳಲ್ಲಿ ತೊಡಗಿರುವ ಸಾಧ್ಯತೆ ಇದೆ ಎಂದು ಪರೋಕ್ಷವಾಗಿ ಆಪಾದಿಸಿದ್ದರು. ಈ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿ, ಅವರು ತಮ್ಮ ಪೋಸ್ಟ್ ನಲ್ಲಿ ಪಶ್ಚಿಮ ಬಂಗಾಳ ಪೊಲೀಸರು ಹಾಗೂ ರಾಷ್ಟ್ರೀಯ ತನಿಖಾ ದಳವನ್ನು ಟ್ಯಾಗ್ ಕೂಡಾ ಮಾಡಿದ್ದರು.
ಆದರೆ, ಈ ಪೋಸ್ಟ್ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆಯುತ್ತಿದ್ದಂತೆಯೆ, ಸುವೇಂದು ಅಧಿಕಾರಿ ಆರೋಪಿಸಿರುವಂತೆ ಚಿತ್ರದಲ್ಲಿ ಕಂಡು ಬಂದಿರುವ ಸಾಧನವು ನ್ಯಾನೊಬೀಮ್ 2ಎಸಿ ಸಾಧನವಲ್ಲ ಎಂಬುದರತ್ತ ಹಲವು ಫ್ಯಾಕ್ಟ್ ಚೆಕರ್ ಗಳು, ಸಾಮಾಜಿಕ ಮಾಧ್ಯಮ ಬಳಕೆದಾರರು ಬೊಟ್ಟು ಮಾಡಿದ್ದಾರೆ. ಚಿತ್ರದಲ್ಲಿ ಕಂಡು ಬಂದಿರುವ ಸಾಧನವು ಸಾಮಾನ್ಯವಾಗಿ ಬ್ರಾಡ್ ಬ್ಯಾಂಡ್ ಇಂಟರ್ ನೆಟ್ ಸಂಪರ್ಕಕ್ಕಾಗಿ ಬಳಸುವ ಜಿಯೊ ಫೈಬರ್ ಪ್ಲಸ್ ಸಿ6 ಹೊರಾಂಗಣ ಸಾಧನವೇ ಹೊರತು, ಸುವೇಂದು ಅಧಿಕಾರಿ ಆರೋಪಿಸಿರುವಂತೆ ಭಾರಿ ಸಾಮರ್ಥ್ಯದ ವೈರ್ ಲೆಸ್ ಬ್ರಿಡ್ಜ್ ಸಾಧನವಲ್ಲ ಎಂದು ಫ್ಯಾಕ್ಟ್ ಚೆಕಿಂಗ್ ಪೋರ್ಟಲ್ ಆದ ಆಲ್ಟ್ ನ್ಯೂಸ್ ನ ಸಹ ಸಂಸ್ಥಾಪಕ ಮುಹಮ್ಮದ್ ಝುಬೇರ್ ಸ್ಪಷ್ಟಪಡಿಸಿದ್ದಾರೆ.
ಸುವೇಂದು ಅಧಿಕಾರಿಯ ಈ ಪೋಸ್ಟ್ ಅನ್ನು ನಾಗರಿಕರು, ಹೋರಾಟಗಾರರು ಹಾಗೂ ಪತ್ರಕರ್ತರು ಬಲವಾಗಿ ಖಂಡಿಸಿದ್ದು, ಇತ್ತೀಚಿನ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಕೋಮು ದ್ವೇಷದ ಭಾವನೆಗಳು ತೀವ್ರಗೊಂಡಿರುವ ಹೊತ್ತಿನಲ್ಲಿ ನಾಗರಿಕರು, ನಿರ್ದಿಷ್ಟವಾಗಿ ಕಾಶ್ಮೀರಿ ಪ್ರಜೆಗಳ ನಿವಾಸದ ವಿಳಾಸವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿರುವುದರ ಹಿಂದಿನ ಉದ್ದೇಶವನ್ನು ಅವರೆಲ್ಲ ಪ್ರಶ್ನಿಸಿದ್ದಾರೆ.
ಸುವೇಂದು ಅಧಿಕಾರಿ ಮಾಡಿರುವ ಪೋಸ್ಟ್ ಸಂಶಯ ಮತ್ತು ದ್ವೇಷಕ್ಕೆ ತುಪ್ಪ ಸುರಿಯುವ ಪ್ರಯತ್ನವಾಗಿದ್ದು, ಇದರಿಂದ ಕಾಶ್ಮೀರಿ ಪ್ರಜೆಗಳು ಗುಂಪು ಹಿಂಸಾಚಾರ ಅಥವಾ ಕಿರುಕುಳದ ಅಪಾಯಕ್ಕೆ ಈಡಾಗುವ ಸಾಧ್ಯತೆ ಇದೆ ಎಂದು ಹಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಕಳವಳ ವ್ಯಕ್ತಪಡಿಸಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಕಾಶ್ಮೀರಿ ಪ್ರಜೆಗಳ ವಿರುದ್ಧದ ದ್ವೇಷ ಭಾವನೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ, ನಾಗರಿಕರ ಖಾಸಗಿ ಮಾಹಿತಿಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡಿರುವ ಸುವೇಂದು ಅಧಿಕಾರಿಯ ಕೃತ್ಯವು ಹೊಣೆಗೇಡಿತನದ್ದು ಹಾಗೂ ಅಪಾಯಕಾರಿಯಾದದ್ದು ಎಂದು ವ್ಯಾಪಕ ಖಂಡನೆ ವ್ಯಕ್ತವಾಗಿದೆ.







