‘ಶಂಕರಾಚಾರ್ಯ’ ಹೆಸರು ಬಳಕೆ ಪ್ರಶ್ನಿಸಿ ಕಾನೂನು ನೋಟಿಸ್; ಕಾನೂನು ಕ್ರಮದ ಎಚ್ಚರಿಕೆ ನೀಡಿದ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ

ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ | Photo Credit : PTI
ಪ್ರಯಾಗ್ರಾಜ್, ಜ. 21: ತಾನು ‘‘ಶಂಕರಾಚಾರ್ಯ’’ ಎಂಬ ಹೆಸರನ್ನು ಬಳಸುತ್ತಿರುವುದನ್ನು ಪ್ರಶ್ನಿಸಿ ಮಾಘ ಮೇಳ ಆಡಳಿತ ಸಮಿತಿಯು ನೀಡಿರುವ ಕಾನೂನು ನೋಟಿಸ್ಗೆ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಈ ನೋಟಿಸ್ ಅನ್ನು ಹಿಂದಕ್ಕೆ ಪಡೆಯದಿದ್ದರೆ, ತಾನು ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದರ ಜೊತೆಗೆ ಅಧಿಕಾರಿಗಳ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನೂ ಹೂಡುತ್ತೇನೆ ಎಂದು ಅವರು ಎಚ್ಚರಿಸಿದ್ದಾರೆ.
‘‘ಶಂಕರಾಚಾರ್ಯ’’ ಪದವಿಯನ್ನು ಸಾಂಪ್ರದಾಯಿಕವಾಗಿ ಸನಾತನ ಧರ್ಮದ ಅತ್ಯುನ್ನತ ಧಾರ್ಮಿಕ ಮುಖ್ಯಸ್ಥರಿಗೆ ನೀಡಲಾಗುತ್ತದೆ.
ಮಂಗಳವಾರ, ‘‘ಶಂಕರಾಚಾರ್ಯ’’ ಹೆಸರಿನ ಬಳಕೆಯನ್ನು ಪ್ರಶ್ನಿಸಿ ಪ್ರಯಾಗ್ರಾಜ್ ಮೇಳ ಪ್ರಾಧಿಕಾರವು ಸ್ವಾಮಿ ಅವಿಮುಕ್ತೇಶ್ವರಾನಂದರಿಗೆ ನೋಟಿಸ್ ಕಳುಹಿಸಿದ್ದು, ಆ ಹೆಸರನ್ನು ಬಳಸಲು ನಿಮಗಿರುವ ಅರ್ಹತೆಗಳ ಕುರಿತು ವಿವರಣೆ ನೀಡುವಂತೆ ಸೂಚಿಸಿತ್ತು.
ಬುಧವಾರ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಈ ನೋಟಿಸ್ಗೆ ಎಂಟು ಪುಟಗಳ ಉತ್ತರ ನೀಡಿದ್ದಾರೆ. ನೋಟಿಸ್ ಅನ್ನು ಅವಮಾನಕರವೆಂದು ಬಣ್ಣಿಸಿರುವ ಅವರು, ಇದು ಸನಾತನ ಧರ್ಮದ ಅನುಯಾಯಿಗಳ ನಂಬಿಕೆಯಲ್ಲಿ ಹಸ್ತಕ್ಷೇಪ ಮಾಡುವ ಪ್ರಯತ್ನಕ್ಕೆ ಸಮಾನವಾಗಿದೆ ಎಂದು ಆರೋಪಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶಕ್ಕೆ ಅನುಗುಣವಾಗಿಯೇ ನೋಟಿಸ್ ನೀಡಲಾಗಿದೆ ಎಂದು ಮಾಘ ಮೇಳ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಸ್ವಾಮಿ ಅವಿಮುಕ್ತೇಶ್ವರಾನಂದರನ್ನು ಜ್ಯೋತಿರ್ಮಠದ ಶಂಕರಾಚಾರ್ಯರಾಗಿ ಮಾನ್ಯ ಮಾಡಲಾಗಿಲ್ಲ ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
‘‘ಶಂಕರಾಚಾರ್ಯ’’ ಪದವಿಯನ್ನು ನೀವು ಯಾವ ಆಧಾರದ ಮೇಲೆ ನಿಮ್ಮದೆಂದು ಹೇಳಿಕೊಳ್ಳುತ್ತೀರಿ ಎಂಬುದಾಗಿ ನೋಟಿಸ್ ಪ್ರಶ್ನಿಸಿದ್ದು, 24 ಗಂಟೆಗಳ ಒಳಗೆ ಉತ್ತರ ನೀಡುವಂತೆ ಸೂಚಿಸಿದೆ.
ಜ್ಯೋತಿರ್ಮಠ ಅಥವಾ ಜ್ಯೋತಿಷ್ ಪೀಠದ ನಿಜವಾದ ಶಂಕರಾಚಾರ್ಯ ಯಾರು ಎಂಬ ಕುರಿತು ಜಗತ್ ಗುರು ಶಂಕರಾಚಾರ್ಯ ಪಿ.ಎಸ್.ಎಸ್.ಎನ್. ಸರಸ್ವತಿ ಮತ್ತು ಸ್ವಾಮಿ ವಾಸುದೇವಾನಂದ ಸರಸ್ವತಿ ನಡುವೆ ದೀರ್ಘಕಾಲದಿಂದ ವಿವಾದ ಮುಂದುವರಿದಿದೆ.







