ಸ್ವಿಸ್ ಓಪನ್: ಸೆಮಿಫೈನಲ್ ನಲ್ಲಿ ಕಿಡಂಬಿ ಶ್ರೀಕಾಂತ್ ಗೆ ಸೋಲು

ಕಿಡಂಬಿ ಶ್ರೀಕಾಂತ್ | Photo: PTI
ಬಾಸೆಲ್: ಸ್ವಿಟ್ಜರ್ಲ್ಯಾಂಡ್ನ ಬಾಸೆಲ್ ನಲ್ಲಿ ನಡೆಯುತ್ತಿರುವ ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಕಿಡಂಬಿ ಶ್ರೀಕಾಂತ್ ರ ಅಭಿಯಾನ ಮುಕ್ತಾಯಗೊಂಡಿದೆ.
ಬಾಸೆಲ್ ನ ಸೈಂಟ್ ಜಾಕೋಬ್ ಶಲ್ ಅರೀನಾದಲ್ಲಿ ಶನಿವಾರ ನಡೆದ ಪುರುಷರ ಸಿಂಗಲ್ಸ್ ಸೆಮಿಫೈನಲ್ ನಲ್ಲಿ ಭಾರತದ ತಾರಾ ಬ್ಯಾಡ್ಮಿಂಟನ್ ಆಟಗಾರ ಚೈನೀಸ್ ತೈಪೆಯ ಲಿನ್ ಚುನ್-ಯಿ ವಿರುದ್ಧ 21-15, 9-21, 18-21 ಗೇಮ್ ಗಳಿಂದ ಪರಾಭವಗೊಂಡರು.
ಇದು 2022 ನವೆಂಬರ್ ಬಳಿಕ, ಶ್ರೀಕಾಂತ್ರ ಮೊದಲ ಬಿಡಬ್ಲ್ಯುಎಫ್ ಸೆಮಿಫೈನಲ್ ಆಗಿದೆ.
ಭಾರತದ ಮಾಜಿ ವಿಶ್ವ ನಂಬರ್ ವನ್ ಆಟಗಾರ ಪಂದ್ಯವನ್ನು ಉತ್ತಮವಾಗಿಯೇ ಆರಂಭಿಸಿದರು. ಅವರು ತನ್ನ ಆಕ್ರಮಣಕಾರಿ ಸ್ಮ್ಯಾಶ್ ಗಳು ಮತ್ತು ಅಮೋಘ ನೆಟ್ ಪ್ಲೇ ಮೂಲಕ ಮೊದಲ ಗೇಮನ್ನು 21-15ರಿಂದ ಗೆದ್ದರು.
ಆದರೆ, ಎರಡನೇ ಗೇಮ್ ನಲ್ಲಿ 31 ವರ್ಷದ ಭಾರತೀಯ ಆಟಗಾರನಿಗೆ ತನ್ನ ಎದುರಾಳಿಗೆ ದಿಟ್ಟ ಸ್ಪರ್ಧೆ ನೀಡುವಲ್ಲಿ ವಿಫಲರಾದರು. ಎರಡನೇ ಗೇಮ್ ನಲ್ಲಿ ಅವರು ಒಂದು ಹಂತದಲ್ಲಿ 4-1ರಿಂದ ಮುಂದಿದ್ದರೂ ಅಂತಿಮವಾಗಿ ಗೇಮನ್ನು ಬಿಟ್ಟುಕೊಟ್ಟರು.
ನಿರ್ಣಾಯಕ ಗೇಮ್ ನಲ್ಲಿ, ಚುನ್ ಯಿ ಆರಂಭದಿಂದಲೇ ಆಕ್ರಮಣ ಕಾರಿ ಆಟಕ್ಕೆ ಮೊರೆಹೋದರು. ಹಾಗಾಗಿ, ಅವರು 4-1ರ ಮುನ್ನಡೆ ಗಳಿಸಿದರು. ಆದರೆ, ಅರ್ಧಾವಧಿಯಲ್ಲಿ ಶ್ರೀಕಾಂತ್ 11-10ರ ಮುನ್ನಡೆ ಪಡೆದರು. ಜಿದ್ದಾ ಜಿದ್ದಿನೊಂದಿಗೆ ಸಾಗಿದ ಆ ಗೇಮನ್ನು ಅಂತಿಮವಾಗಿ ಚೈನೀಸ್ ತೈಪೆ ಆಟಗಾರ ಗೆದ್ದರು.
ಸ್ವಿಸ್ ಓಪನ್ ನಲ್ಲಿ ಉಳಿದಿದ್ದ ಏಕೈಕ ಭಾರತೀಯ ಆಟಗಾರ ಅವರಾಗಿದ್ದರು. ಪ್ರಿಯಾಂಶು ರಾಜವತ್ ಮತ್ತು ಕಿರಣ್ ಜಾರ್ಜ್ ಕ್ವಾರ್ಟರ್ಫೈನಲ್ ನಲ್ಲಿ ಹೊರಬಿದ್ದಿದ್ದರೆ, ಟ್ರೀಸಾ ಜೋಲಿ ಮತ್ತು ಗಾಯತ್ರಿ ಗೋಪಿಚಂದ್ ಕೂಡ ಹೊರಬಿದ್ದಿದ್ದಾರೆ.
ಮಹಿಳೆಯರ ಸಿಂಗಲ್ಸ್ ನಲ್ಲಿ ಪಿ.ವಿ. ಸಿಂಧೂ ಎರಡನೇ ಸುತ್ತಿನಲ್ಲೇ ಹೊರಬಿದ್ದಿದ್ದರು.







