ಬಾಹ್ಯಾಕಾಶದಲ್ಲಿ ರಕ್ತವೆಲ್ಲ ತಲೆಗೆ ಹರಿದು ಮುಖ ಊದಿಕೊಳ್ಳುತ್ತದೆ: ಗಗನಯಾತ್ರಿ ಶುಭಾಂಶು ಶುಕ್ಲಾ

ಶುಭಾಂಶು ಶುಕ್ಲಾ | PC : PTI
ಹೊಸದಿಲ್ಲಿ: ಬಾಹ್ಯಾಕಾಶ ಯಾನವು ಕನಸಿನಂತೆ ಕಾಣಿಸಿದರೂ, ದೇಹ ಮತ್ತು ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಹೇಳಿದ್ದಾರೆ.
FICCI ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಹ್ಯಾಕಾಶ ತಲುಪಿದ ತಕ್ಷಣ ದೇಹದಲ್ಲಿನ ರಕ್ತವು ತಲೆಗೆ ಹರಿದು ಮುಖ ಊದಿಕೊಳ್ಳುವುದು, ಹೃದಯ ಬಡಿತ ನಿಧಾನಗೊಳ್ಳುವುದು, ಬೆನ್ನುಮೂಳೆ ಉದ್ದವಾಗುವುದು, ಹಸಿವು ಕಡಿಮೆಯಾಗುವುದು ಮೊದಲಾದ ಬದಲಾವಣೆಗಳು ನಡೆಯುತ್ತವೆ ಎಂದು ವಿವರಿಸಿದರು.
ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸಂವಾದಕ್ಕೂ ಮುನ್ನ ತಾವು ತಲೆನೋವು ಮತ್ತು ವಾಕರಿಕೆಯಿಂದ ಬಳಲಿದ ಅನುಭವವನ್ನೂ ಹಂಚಿಕೊಂಡರು.
ಭೂಮಿಯನ್ನು ಮೇಲಿನಿಂದ ನೋಡುವುದು, ವಿಶೇಷವಾಗಿ ಭಾರತವನ್ನು ಗುರುತಿಸುವ ಅನುಭವ, ಮನಸ್ಸಿಗೆ ಅಪಾರ ಪ್ರೇರಣೆಯನ್ನು ನೀಡುತ್ತದೆ ಎಂದು ಶುಭಾಂಶು ಶುಕ್ಲಾ ಹೇಳಿದರು.
ಮುಂದಿನ ಗಗನಯಾನ ಮಿಷನ್ ಹಾಗೂ 2040ರೊಳಗೆ ಚಂದ್ರನ ಮೇಲಿನ ಭಾರತದ ಉಪಸ್ಥಿತಿ, ರಾಷ್ಟ್ರದ ಬಾಹ್ಯಾಕಾಶ ಕನಸುಗಳಿಗೆ ಮಹತ್ವದ ಮೈಲಿಗಲ್ಲಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.





