ಕುರೇಶಿ ಮುಸ್ಲಿಮ್ ಆಯುಕ್ತರಾಗಿದ್ದರು: ವಕ್ಫ್ ಕಾಯ್ದೆ ಟೀಕೆಗಾಗಿ ಮಾಜಿ ಸಿಇಸಿ ವಿರುದ್ಧ ದುಬೆ ವಾಗ್ದಾಳಿ

Photo : hindustantimes
ಹೊಸದಿಲ್ಲಿ: ಮಾಜಿ ಮುಖ್ಯ ಚುನಾವಣಾ ಆಯುಕ್ತ(ಸಿಇಸಿ) ಎಸ್.ವೈ.ಕುರೇಶಿ ವಿರುದ್ಧ ರವಿವಾರ ವಾಗ್ದಾಳಿ ನಡೆಸಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಅವರು ಚುನಾವಣಾ ಆಯುಕ್ತರ ಬದಲಾಗಿ ‘ಮುಸ್ಲಿಮ್ ಆಯುಕ್ತ’ರಾಗಿದ್ದರು ಎಂದು ಹೇಳಿದ್ದಾರೆ.
ಕುರೇಶಿ ಎ.17ರಂದು ತನ್ನ ಎಕ್ಸ್ ಪೋಸ್ಟ್ ನಲ್ಲಿ ‘ವಕ್ಫ್(ತಿದ್ದುಪಡಿ) ಕಾಯ್ದೆಯು ನಿಸ್ಸಂದೇಹವಾಗಿ ಮುಸ್ಲಿಮರ ಭೂಮಿಯನ್ನು ಕಿತ್ತುಕೊಳ್ಳಲು ಸರಕಾರದ ದುಷ್ಟ ಯೋಜನೆಯಾಗಿದೆ. ಸರ್ವೋಚ್ಚ ನ್ಯಾಯಾಲಯವು ಅದನ್ನು ಖಂಡಿಸುತ್ತದೆ ಎಂಬ ವಿಶ್ವಾಸ ನನಗಿದೆ. ದುರುದ್ದೇಶಪೂರಿತ ಪ್ರಚಾರ ವ್ಯವಸ್ಥೆಯಿಂದ ತಪ್ಪುಮಾಹಿತಿಯು ತನ್ನ ಕೆಲಸವನ್ನು ಚೆನ್ನಾಗಿ ಮಾಡಿದೆ ’ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ದುಬೆ, ಕುರೇಶಿ ತನ್ನ ಅಧಿಕಾರಾವಧಿಯಲ್ಲಿ ಕೋಮು ಪಕ್ಷಪಾತಿಯಾಗಿದ್ದರು ಎಂದು ಆರೋಪಿಸಿದ್ದಾರೆ.
‘ನೀವು ಚುನಾವಣಾ ಆಯುಕ್ತರಾಗಿರಲಿಲ್ಲ, ನೀವು ಮುಸ್ಲಿಮ್ ಆಯುಕ್ತರಾಗಿದ್ದೀರಿ. ನಿಮ್ಮ ಅವಧಿಯಲ್ಲಿ ಜಾರ್ಖಂಡ್ ನ ಸಂತಾಲ ಪರಗಣದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಬಾಂಗ್ಲಾದೇಶಿ ನುಸುಳುಕೋರರನ್ನು ಮತದಾರರನ್ನಾಗಿ ಮಾಡಲಾಗಿತ್ತು’ ಎಂದು ಹೇಳಿರುವ ದುಬೆ, ಪ್ರವಾದಿ ಮುಹಮ್ಮದ್ ರ ಇಸ್ಲಾಮ್ 712ರಲ್ಲಿ ಭಾರತಕ್ಕೆ ಬಂದಿತ್ತು. ಅದಕ್ಕೂ ಮುನ್ನ ಈ ಭೂಮಿ(ವಕ್ಫ್)ಹಿಂದುಗಳು ಅಥವಾ ಆದಿವಾಸಿಗಳು, ಆ ಧರ್ಮದೊಂದಿಗೆ ಗುರುತಿಸಿಕೊಂಡಿದ್ದ ಜೈನರು ಅಥವಾ ಬೌದ್ಧರಿಗೆ ಸೇರಿತ್ತು ಎಂದಿದ್ದಾರೆ.







