"ಇದು ನಮ್ಮನ್ನು ವಿಭಜಿಸುವ ತಂತ್ರ": ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಏಕತೆಗೆ ಕರೆ ನೀಡಿದ ನಿವೃತ್ತ ಬ್ರಿಗೇಡಿಯರ್; ವಿಡಿಯೋ ವೈರಲ್

PC : Instagram/@deepbhagat
ಹೊಸದಿಲ್ಲಿ: ಶೌರ್ಯ ಪ್ರಶಸ್ತಿ ಪುರಸ್ಕೃತ, ನಿವೃತ್ತ ಸೇನಾ ಅಧಿಕಾರಿಯೊಬ್ಬರು ಏಕತೆಗೆ ಕರೆ ನೀಡಿರುವ, ಜನರು ಕೋಮು ವಿಭಜನೆಯ ಬಲೆಗೆ ಬೀಳದಂತೆ ಆಗ್ರಹಿಸಿರುವ ವಿಡಿಯೋ ವೈರಲ್ ಆಗಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ದೇಶವು ಸಂತಾಪ ಸೂಚಿಸುತ್ತಿರುವ ವೇಳೆ ವೈರಲ್ ಆಗಿರುವ ಸಂದೇಶದಲ್ಲಿ ನಿವೃತ್ತ ಸೇನಾಧಿಕಾರಿ, ಭಯೋತ್ಪಾದಕರು ನಿಖರವಾಗಿ ಇದನ್ನೇ ಬಯಸುವುದು ಎಂದು ಒತ್ತಿ ಹೇಳಿದ್ದಾರೆ.
ಈ ಸಂದೇಶ ಹಂಚಿಕೊಂಡಿರುವ ಸೇನಾಧಿಕಾರಿ ನಿವೃತ್ತ ಬ್ರಿಗೇಡಿಯರ್ ದೀಪ್ ಭಗತ್ ಅವರ ಮಗ ಕಂಟೆಂಟ್ ಕ್ರಿಯೇಟರ್ ಅನೀಶ್ ಭಗತ್, ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ದೀಪ್ ಭಗತ್ ಅವರು ಮಾತನಾಡಿದ್ದಾರೆ.
30 ವರ್ಷಗಳಿಗೂ ಹೆಚ್ಚು ಸೇನೆ ಸಲ್ಲಿಸಿರುವ ನಿವೃತ್ತ ಬ್ರಿಗೇಡಿಯರ್ ದೀಪ್ ಭಗತ್ ಅವರಿಗೆ ಪಾಕಿಸ್ತಾನದ ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಕ್ಕಾಗಿ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
"ಇದು ಒಂದು ವಿಭಜನೆಯ ತಂತ್ರ. ನಮ್ಮನ್ನು ಕೋಮು ಆಧಾರದ ಮೇಲೆ ವಿಭಜಿಸಲು ಇದನ್ನು ಹೆಣೆಯಲಾಗುತ್ತದೆ", ಎಂದು ಅವರು ಹೇಳಿದ್ದಾರೆ.
ಪಹಲ್ಗಾಮ್ ದಾಳಿಯು ಹಿಂದೂಗಳನ್ನು ಗುರಿಯಾಗಿರಿಸಿಕೊಂಡಿದೆ ಎಂದು ನೀವು ನಂಬುತ್ತೀರಾ ಎಂದು ಕೇಳಿದಾಗ ಬ್ರಿಗೇಡಿಯರ್ ಭಗತ್, "ಇಲ್ಲ, ಇದು ಭಾರತೀಯರ ಮಾನಸಿಕ ಅಶಾಂತಿಯನ್ನು ಸೃಷ್ಟಿಸಲು ಮತ್ತು ದೇಶಾದ್ಯಂತ ಧಾರ್ಮಿಕ ಉದ್ವಿಗ್ನತೆಯನ್ನು ಪ್ರಚೋದಿಸಲು ಈ ಘಟನೆಯನ್ನು ಬಳಸುತ್ತಿದ್ದಾರೆ", ಎಂದು ಅವರು ಸ್ಪಷ್ಟಪಡಿಸಿದರು.
"ಧಾರ್ಮಿಕ ಆಧಾರದ ಮೇಲೆ ನಮ್ಮ ದೇಶದಲ್ಲಿ ಜಗಳಗಳನ್ನು ಸೃಷ್ಟಿಸಲು ನೋಡಲಾಗುತ್ತಿದೆ ಅದು ನಿಜವಾದ ಗುರಿ. ಹಾಗಾಗಿ ನಾವು ಒಗ್ಗಟ್ಟಿನಿಂದ ಇರಬೇಕು," ಎಂದು ಅವರು ಹೇಳಿದರು.
ದೀಪ್ ಭಗತ್ ಅವರ ಹೇಳಿಕೆಗೆ ಸಾಮಾಜಿಕ ಜಾಲ ತಾಣ ಬಳಕೆದಾರರಲ್ಲಿ ಹೆಚ್ಚಿನವರು ಶ್ಲಾಘಿಸಿದ್ದಾರೆ."ನೀವು ನಿಜವಾದ ದೇಶಭಕ್ತ", ಎಂದು ಒಬ್ಬರು ಬಳಕೆದಾರರು ಬರೆದಿದ್ದಾರೆ.
"ಒಬ್ಬ ಭಾರತೀಯನಾಗಿ ನಾವು ಒಗ್ಗಟ್ಟಿನಿಂದ ನಿಲ್ಲಬೇಕು" ಎಂದು ಮತ್ತೊಬ್ಬರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
"ಈ ವೀಡಿಯೊವನ್ನು ಇಷ್ಟು ಚೆನ್ನಾಗಿ ಮಾಡಿದ್ದಕ್ಕಾಗಿ ಧನ್ಯವಾದಗಳು. ನಮಗೆ ಈಗ ಇದು ಎಂದಿಗಿಂತಲೂ ಹೆಚ್ಚು ಅಗತ್ಯವಿದೆ", ಎಂದು ಮತ್ತೊಬ್ಬರು ಬಳಕೆದಾರರು ಬರೆದಿದ್ದಾರೆ.
ವೀಡಿಯೊ ಹಂಚಿಕೊಂಡಾಗಿನಿಂದ 4.2 ಮಿಲಿಯನ್ ಜನರು ಅದನ್ನು ವೀಕ್ಷಿಸಿದ್ದಾರೆ.
ಏಪ್ರಿಲ್ 22 ರಂದು ಕಾಶ್ಮೀರದ ಜನಪ್ರಿಯ ತಾಣವಾದ ಪಹಲ್ಗಾಮ್ ನಲ್ಲಿ ಭಯೋತ್ಪಾದಕ ದಾಳಿ ನಡೆಯಿತು. ಈ ದಾಳಿಯಲ್ಲಿ ಕನಿಷ್ಠ 26 ಜನರು ಮೃತಪಟ್ಟಿದ್ದರು.







