ದಿಲ್ಲಿ ಚುನಾವಣೆಗೆ ಪ್ರಚಾರ ನಡೆಸಲು ಆಪ್ ಮಾಜಿ ಕೌನ್ಸಿಲರ್ ತಾಹಿರ್ ಹುಸೇನ್ ಗೆ ಪೆರೋಲ್ ನೀಡಿದ ಸುಪ್ರೀಂಕೋರ್ಟ್

ತಾಹಿರ್ ಹುಸೇನ್ (Photo:X)
ಹೊಸದಿಲ್ಲಿ : 2020ರ ದಿಲ್ಲಿ ಗಲಭೆ ಪ್ರಕರಣದ ಆರೋಪಿಯಾಗಿರುವ ಆಪ್ ನ ಮಾಜಿ ಕೌನ್ಸಿಲರ್ ತಾಹಿರ್ ಹುಸೇನ್ ಅವರಿಗೆ ದಿಲ್ಲಿ ವಿಧಾನಸಭಾ ಚುನಾವಣೆಗೆ ಪ್ರಚಾರ ಮಾಡಲು ಸುಪ್ರೀಂ ಕೋರ್ಟ್ ಪೆರೋಲ್ ನೀಡಿದೆ.
ಹುಸೇನ್ ಅವರಿಗೆ ಜನವರಿ 29ರಿಂದ ಫೆಬ್ರವರಿ 3ರವರೆಗೆ 12 ಗಂಟೆಗಳ ಕಾಲ ಷರತ್ತು ಬದ್ಧ ಕಸ್ಟಡಿ ಪೆರೋಲ್ ಮಂಜೂರು ಮಾಡಿದೆ. ಇಬ್ಬರು ಪೊಲೀಸ್ ಸಿಬ್ಬಂದಿ, ಜೈಲು ವ್ಯಾನ್ ಮತ್ತು ಬೆಂಗಾವಲು ವಾಹನದ ವೆಚ್ಚವನ್ನು ಭರಿಸಬೇಕು, ಈ ಹಣವನ್ನು ಮುಂಗಡವಾಗಿ ಠೇವಣಿ ಇಡಬೇಕು ಎಂದು ಕೋರ್ಟ್ ತಾಹಿರ್ ಹುಸೇನ್ ಗೆ ನಿರ್ದೇಶನವನ್ನು ನೀಡಿದೆ.
ನ್ಯಾಯಾಲಯವು ತಾಹಿರ್ ಹುಸೇನ್ ಅವರಿಗೆ ಪಕ್ಷದ ಕಚೇರಿಗೆ ಭೇಟಿ ನೀಡಲು ಮತ್ತು ಕ್ಷೇತ್ರದೊಳಗಿನ ಮತದಾರರೊಂದಿಗೆ ಸಭೆ ನಡೆಸಲು ಅವಕಾಶ ನೀಡಿದೆ. ಆದರೆ ಕರವಾಲ್ ನಗರದಲ್ಲಿರುವ ಅವರ ಮನೆಗೆ ಭೇಟಿ ನೀಡಲು ಅವಕಾಶ ನಿರಾಕರಿಸಿದೆ. ಇದಲ್ಲದೆ ಅವರ ವಿರುದ್ಧ ಕೋರ್ಟ್ ನಲ್ಲಿ ವಿಚಾರಣೆಯಲ್ಲಿರುವ ಪ್ರಕರಣಗಳ ಬಗ್ಗೆ ಮಾತನಾಡದಂತೆ ನಿರ್ಬಂಧ ವಿಧಿಸಿದೆ.
2020ರ ಫೆಬ್ರವರಿ 24ರಂದು ಈಶಾನ್ಯ ದಿಲ್ಲಿಯಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಪ್ರಕರಣದಲ್ಲಿ 53 ಜನರು ಮೃತಪಟ್ಟಿದ್ದರು. ಗುಪ್ತಚರ ಬ್ಯೂರೋ ಸಿಬ್ಬಂದಿ ಅಂಕಿತ್ ಶರ್ಮಾ ಸಾವಿಗೆ ಸಂಬಂಧಿಸಿದ ಪ್ರಕರಣದಲ್ಲಿ ತಾಹೀರ್ ಹುಸೇನ್ ರನ್ನು ಬಂಧಿಸಲಾಗಿತ್ತು.
ದಿಲ್ಲಿ ವಿಧಾನಸಭಾ ಚುನಾವಣೆಗೆ ಪ್ರಚಾರ ಮಾಡಲು ಅವಕಾಶ ನೀಡಬೇಕೆಂದು ತಾಹಿರ್ ಹುಸೇನ್ ಮಂಗಳವಾರ ಸುಪ್ರೀಂ ಕೋರ್ಟ ಗೆ ಮನವಿ ಮಾಡಿದ್ದರು.







