ʼಹೆಚ್ಚು ಮಾತು, ಕಡಿಮೆ ಕೆಲಸʼ : ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಮಲ್ಲಿಕಾರ್ಜುನ ಖರ್ಗೆ (Photo: PTI)
ಹೊಸ ದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಹೆಚ್ಚು ಮಾತನಾಡುತ್ತಾರೆ, ಕಡಿಮೆ ಕೆಲಸ ಮಾಡುತ್ತಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು. ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರಕ್ಕೆ ಹೋಲಿಸಿದರೆ, ಶೇ.10ರಷ್ಟು ಕೆಲಸವನ್ನೂ ಮೋದಿ ಸರಕಾರ ಕಳೆದ 11 ವರ್ಷಗಳಲ್ಲಿ ಮಾಡಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ಡಾ. ಮನಮೋಹನ್ ಸಿಂಗ್ ಫೆಲೋಶಿಪ್ ಕಾರ್ಯಕ್ರಮದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಸಂಸತ್ ಅಧಿವೇಶನ ನಡೆಯುವಾಗ ಡಾ. ಮನಮೋಹನ್ ಸಿಂಗ್ ಯಾವಾಗಲೂ ಸದನದಲ್ಲಿ ಹಾಜರಿರುತ್ತಿದ್ದರು, ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು ಹಾಗೂ ವಿರೋಧ ಪಕ್ಷಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದರು. ಅವರು ಯಾವಾಗಲೂ ಚರ್ಚೆಯಲ್ಲಿ ಭಾಗವಹಿಸುತ್ತಿದ್ದರು. ಆದರೆ, ಹಾಲಿ ಪ್ರಧಾನಿ ನರೇಂದ್ರ ಮೋದಿ ಇದು ತಮ್ಮ ಘನತೆಗೆ ತಕ್ಕದ್ದಲ್ಲ ಎಂದು ಭಾವಿಸಿದ್ದಾರೆ ಎಂದು ಡಾ. ಮನಮೋಹನ್ ಸಿಂಗ್ ಅವರೊಂದಿಗಿನ ತಮ್ಮ ಒಡನಾಟವನ್ನು ಅವರು ಸ್ಮರಿಸಿದರು.
ಡಾ. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಆಗಿದ್ದ ಕೆಲಸಗಳಿಗೆ ಹೋಲಿಸಿದರೆ, ಈ 11 ವರ್ಷಗಳಲ್ಲಿ ಶೇ. 10ರಷ್ಟೂ ಕೆಲಸಗಳಾಗಿಲ್ಲ. ಯಾವ ನಾಯಕರು ಹೆಚ್ಚು ವಿದ್ಯಾವಂತರಾಗಿರುತ್ತಾರೊ ಹಾಗೂ ಹೆಚ್ಚು ವ್ಯಾಸಂಗ ಮಾಡುತ್ತಾರೊ, ಅಂಥವರು ಭಾರಿ ಜ್ಞಾನಿಗಳಾಗಿರುತ್ತಾರೆ. ಅಂಥವರು ಹೆಚ್ಚು ಕೆಲಸ ಮಾಡುತ್ತಾರೆಯೇ ಹೊರತು ಹೆಚ್ಚು ಪ್ರಚಾರವನ್ನು ಅವಲಂಬಿಸಿರುವುದಿಲ್ಲ ಎಂದು ಪ್ರಧಾನಿ ಮೋದಿಯನ್ನು ಖರ್ಗೆ ಲೇವಡಿ ಮಾಡಿದರು.
ಇಂದಿನ ಕಾಲದಲ್ಲಿ ಡೇಟಾ ಮತ್ತು ತಂತ್ರಜ್ಞಾನ ಬಳಸಿ ಮತ ಕಳ್ಳತನ ಅಕ್ರಮಗಳನ್ನು ಬಹಿರಂಗಪಡಿಸಬಹುದು. ಜಾತಿ ಜನಗಣತಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿ, ವಿಶ್ಲೇಷಿಸಲು ತಜ್ಞರು ದೊಡ್ಡ ಪಾತ್ರ ವಹಿಸಬೇಕು ಎಂದು ಖರ್ಗೆ ಹೇಳಿದರು.







