ಭಾರತ-ಪಾಕ್ ನಡುವಿನ ಶಾಂತಿ ಒಪ್ಪಂದ ಕುರಿತು ಮತ್ತೆ ಹೇಳಿಕೆ ನೀಡಿದ ಟ್ರಂಪ್; 60ನೇ ಬಾರಿಯ ಹೇಳಿಕೆ ಎಂದು ವ್ಯಂಗ್ಯವಾಡಿದ ಕಾಂಗ್ರೆಸ್

Photo credit: PTI
ಹೊಸದಿಲ್ಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಬಿಕ್ಕಟ್ಟನ್ನು ನಾನು ಪರಿಹರಿಸಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಹೇಳಿಕೆಗೆ ಸಂಬಂಧಿಸಿದಂತೆ ಬುಧವಾರ ನರೇಂದ್ರ ಮೋದಿ ನೇತೃತ್ವದ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ಇದೀಗ ಇದು 60ನೇ ಬಾರಿಯ ಹೇಳಿಕೆಯಾಗಿದೆ ಎಂದು ವ್ಯಂಗ್ಯವಾಡಿದೆ.
ನಾನು ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸಿದೆ ಎಂದು ಮಂಗಳವಾರ ಸೌದಿ ಅರೇಬಿಯ ಯುವರಾಜರೊಂದಿಗೆ ನಡೆದ ದ್ವಿಪಕ್ಷೀಯ ಸಭೆಯಲ್ಲಿ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದರು.
ಈ ಕುರಿತು ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಜೈರಾಮ್ ರಮೇಶ್, “ಇಂತಹ ಹೇಳಿಕೆಗಳು ನಿಂತಂತೆ ಕಂಡು ಬಂದಾಗಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದನ್ನು ಮತ್ತೆ ಇಡೀ ಜಗತ್ತಿಗೆ ನೆನಪಿಸುತ್ತಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ.
“ಸೌದಿ ಅರೇಬಿಯಾ ಯುವರಾಜರೊಂದಿಗೆ ಮಂಗಳವಾರ ನಡೆದ ದ್ವಿಪಕ್ಷೀಯ ಸಭೆಯ ವೇಳೆ, ನಾನು ಮಧ್ಯಪ್ರವೇಶಿಸಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ” ಎಂದು ಅವರು ಉಲ್ಲೇಖಿಸಿದ್ದಾರೆ.
“ಖಂಡಿತವಾಗಿಯೂ ಅವರು ಇದೇ ಹೇಳಿಕೆಯನ್ನು ಇದಕ್ಕೂ ಮುನ್ನ ಸೌದಿ ಅರೇಬಿಯಾ, ಖತರ್, ಈಜಿಪ್ಟ್, ಬ್ರಿಟನ್, ನೆದರ್ ಲ್ಯಾಂಡ್ಸ್ ಹಾಗೂ ಜಪಾನ್ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿನ ಮಾಧ್ಯಮ ಸಂವಾದಗಳಲ್ಲಿ ನೀಡಿದ್ದರು” ಎಂದೂ ಅವರು ನೆನಪಿಸಿದ್ದಾರೆ.
“ಇದೀಗ ಈ ಹೇಳಿಕೆಯ ಸಂಖ್ಯೆ 60ಕ್ಕೆ ತಲುಪಿದೆ” ಎಂದು ಅವರು ವ್ಯಂಗ್ಯವಾಡಿದ್ದಾರೆ.
ಇದಕ್ಕೂ ಮುನ್ನ, ಸೌದಿ ಅರೇಬಿಯಾದ ಯುವರಾಜರೊಂದಿಗೆ ಮಂಗಳವಾರ ನಡೆದ ದ್ವಿಪಕ್ಷೀಯ ಸಭೆಯಲ್ಲಿ, “ನಾನು ವಾಸ್ತವವಾಗಿ ಈವರೆಗೆ ಎಂಟು ಯುದ್ಧಗಳನ್ನು ನಿಲ್ಲಿಸಿದ್ದೇನೆ. ಮತ್ತೊಂದು ಯುದ್ಧ ಸ್ಥಗಿತಗೊಳ್ಳಲಿದೆ (ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ರೊಂದಿಗೆ ಮಾತುಕತೆ ನಡೆಯುತ್ತಿದೆ) ಆದರೆ, ಇದು ಅಂದುಕೊಂಡಿದ್ದಕ್ಕೆ ದೀರ್ಘಕಾಲ ತೆಗೆದುಕೊಳ್ಳುತ್ತಿರುವುದರಿಂದ, ನನಗೆ ಪುಟಿನ್ ಬಗ್ಗೆ ಕೊಂಚ ಅಚ್ಚರಿಯಾಗಿದೆ. ಹೀಗಿದ್ದೂ, ನಾವು ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ಸ್ಥಗಿತಗೊಳಿಸಿದೆವು” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದರು.







