ತಮಿಳುನಾಡು | ತಿರುಪರಂಕುಂದ್ರಂ ಬೆಟ್ಟಕ್ಕೆ ಮರುನಾಮಕರಣದ ಬೇಡಿಕೆ: ದೇವಾಲಯದ ಹೊರಗೆ ಪ್ರಕ್ಷುಬ್ಧ ವಾತಾವರಣ

ಸಾಂದರ್ಭಿಕ ಚಿತ್ರ | PC : PTI
ಚೆನ್ನೈ: ಮದುರೈ ಬಳಿಯ ತಿರುಪರಂಕುಂದ್ರಂ ಬೆಟ್ಟವು ದರ್ಗಾದ ಆವಾಸ ಸ್ಥಾನವಾಗಿರುವುದರಿಂದ, ಅದಕ್ಕೆ ಸಿಕಂದರ್ ಮಲೈ ಎಂದು ಮರುನಾಮಕರಣ ಮಾಡಬೇಕೆಂದು ಕೆಲವು ಮುಸ್ಲಿಂ ಸಂಘಟನೆಗಳು ಬೇಡಿಕೆ ಇಟ್ಟಿರುವ ಹಿನ್ನೆಲೆಯಲ್ಲಿ ತಿರುಪರಂಕುಂದ್ರಂನ ಮುರುಗನ್ ದೇವಾಲಯದ ಹೊರಗೆ ಹಿಂದೂ ಬಲಪಂಥೀಯ ಸಂಘಟನೆಯಾದ ಹಿಂದೂ ಮುನ್ನಾನಿಯ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದ್ದರಿಂದ, ದೇವಾಲಯದ ಹೊರಗೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.
ತಮಿಳರ ಆರಾಧ್ಯ ದೈವವಾದ ಮುರುಗನ್ ನ ಆವಾಸ ಸ್ಥಾನವೆಂದೇ ಪರಿಗಣಿಸಲಾಗಿರುವ ತಿರುಪರಂಕುದ್ರಂ ಬೆಟ್ಟದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಕೆಲವರು ಮಾಂಸ ಸೇವನೆ ಮಾಡಿದ್ದಾರೆ ಎಂದು ಆರೋಪಿಸಿ, ಮಧುರೈ ಜಿಲ್ಲಾಡಳಿತವು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 163ರ ಅಡಿ ನಿಷೇಧಾಜ್ಞೆ ಹೇರಿದ್ದರೂ, ಕೆಲವರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದರಿಂದ, ಹಿಂದೂ ಮುನ್ನಾನಿ ಸಂಘಟನೆಯು ಪ್ರತಿಭಟನೆಗೆ ಅನುಮತಿ ಕೋರಿ ಮದ್ರಾಸ್ ಹೈಕೋರ್ಟ್ ನ ಕದ ತಟ್ಟಿತು. ಆದರೆ, ನ್ಯಾ. ಜಿ.ಜಯಚಂದ್ರನ್ ಹಾಗೂ ನ್ಯಾ. ಆರ್.ಪೂರ್ಣಿಮಾ ಅವರನ್ನೊಳಗೊಂಡ ನ್ಯಾಯಪೀಠವು ದೇವಾಲಯದ ಆವರಣದಿಂದ 5 ಕಿಮೀ ದೂರವಿರುವ ಪಳಂಗನಾಥಂ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಸಲು ಹಿಂದೂ ಮುನ್ನಾನಿ ಸಂಘಟನೆಯ ಸದಸ್ಯರಿಗೆ ಅನುಮತಿ ನೀಡಿತು.
ಪೊಲೀಸರು ಪರಿಸ್ಥಿತಿಯನ್ನು ಇನ್ನೂ ಉತ್ತಮವಾಗಿ ನಿಭಾಯಿಸಬಹುದಿತ್ತು ಎಂದು ನ್ಯಾಯಾಧೀಶರು ಅಭಿಪ್ರಾಯ ಪಟ್ಟರಾದರೂ, ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡಲು ಸಹಮತಕ್ಕೆ ತಲುಪಿದರು. ಯಾವುದೇ ಪ್ರಚೋದನಕಾರಿ ಅಥವಾ ಘಾಸಿಗೊಳಿಸುವ ಘೋಷಣೆಗಳನ್ನು ಕೂಗಬಾರದು ಹಾಗೂ ಒಂದು ವೇಳೆ ಪ್ರತಿಭಟನಾಕಾರರೇನಾದರೂ ನಿಯಮಗಳನ್ನು ಪಾಲಿಸದಿದ್ದರೆ ಅದಕ್ಕೆ ಅರ್ಜಿದಾರರೇ ಹೊಣೆಯಾಗುತ್ತಾರೆ ಎಂದೂ ಅವರು ಆದೇಶಿಸಿದರು.
ಮಧುರೈ ಹೊರವಲಯದಲ್ಲಿರುವ ತಿರುಪರಂಕುಂದ್ರಂ ಧಾರ್ಮಿಕ ಸೌಹಾರ್ದತೆಯ ಸ್ವರ್ಗವಾಗಿದ್ದು, ಎರಡೂ ಧರ್ಮದ ಜನರು ಸಹಜೀವನದೊಂದಿಗೆ ತಮ್ಮ ತಮ್ಮ ಪೂಜಾ ಸ್ಥಳಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಆದರೆ, ಹದಿನೈದು ದಿನಗಳ ಹಿಂದೆ ಕೆಲವು ವ್ಯಕ್ತಿಗಳು ಈ ಪ್ರದೇಶದಲ್ಲಿ ಮಾಂಸ ಸೇವಿಸುತ್ತಿರುವ ಭಾವಚಿತ್ರಗಳು ವೈರಲ್ ಆಗಿ, ಶ್ರೀ ಮುರುಗನ್ ಅನ್ನು ಆರಾಧಿಸುವ ಜನರಿಂದ ಬಲವಾದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ವಿವಾದ ಸೃಷ್ಟಿಯಾಗಿದೆ.