ಟಿ ಎ ಎಸ್ ಎಂ ಎ ಸಿ ಹಣ ಅಕ್ರಮ ವರ್ಗಾವಣೆ ಪ್ರಕರಣ | ತಮಿಳುನಾಡಿನ ಹಲವೆಡೆ ಈಡಿ ಶೋಧ

PC : @dir_ed
ಚೆನ್ನೈ: ರಾಜ್ಯ ಸ್ವಾಮ್ಯದ ಚಿಲ್ಲರೆ ಮದ್ಯ ಮಾರಾಟ ಕಂಪೆನಿ ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮ ಲಿಮಿಟೆಡ್ (ಟಿ ಎ ಎಸ್ ಎಂ ಎ ಸಿ )ನಲ್ಲಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿ ತಮಿಳುನಾಡಿನ 10 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ಶುಕ್ರವಾರ ಮತ್ತೆ ಶೋಧ ಕಾರ್ಯಾಚರಣೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಿ ಎ ಎಸ್ ಎಂ ಎ ಸಿ ಯಲ್ಲಿ 1,000 ಕೋ.ರೂ. ಅಕ್ರಮ ನಡೆದಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.
ಟಿ ಎ ಎಸ್ ಎಂ ಎ ಸಿ ಹಾಗೂ ಅದರ ಏಜೆಂಟ್ಗಳ ಅಧಿಕಾರಿಗಳಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶುಕ್ರವಾರ ಮುಂಜಾನೆ ದಾಳಿ ನಡೆಸಿದರು.
ಟೆಂಡರ್ ನೀಡುವಲ್ಲಿ ಅಕ್ರಮ ಹಾಗೂ ಟಿ ಎ ಎಸ್ ಎಂ ಎ ಸಿ ಗೆ ಸಂಬಂಧಿಸಿದ ಡಿಸ್ಟಿಲ್ಲರಿಗಳು, ಬಾಟ್ಲಿಂಗ್ ಸಂಸ್ಥೆಗಳಿಂದ ನಿಧಿ ದುರುಪಯೋಗ ಆರೋಪಿಸಿ ಟಿ ಎ ಎಸ್ ಎಂ ಎ ಸಿ ವಿರುದ್ಧ ಜಾರಿ ನಿರ್ದೇಶನಾಲಯ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿತ್ತು ಎಂದು ಅವರು ತಿಳಿಸಿದ್ದಾರೆ.
ಈ ಪ್ರಕರಣ ತಮಿಳುನಾಡಿನ ಮಾಜಿ ಅಬಕಾರಿ ಸಚಿವ ವಿ. ಸೆಂಥಿಲ್ ಬಾಲಾಜಿ ಅವರನ್ನು ಹೊಸ ಸಂಕಷ್ಟಕ್ಕೆ ಸಿಲುಕಿಸಿದೆ. ಬಾಲಾಜಿ ಅವರು ಜಾರಿ ನಿರ್ದೇಶನಾಲಯದ ಇನ್ನೊಂದು ಪ್ರಕರಣದಲ್ಲಿ ಈಗಾಗಲೇ ವಿಚಾರಣೆ ಎದುರಿಸುತ್ತಿದ್ದಾರೆ. ಹಿಂದಿನ ಜಯಲಲಿತಾ ಆಡಳಿತದ ಸಂದರ್ಭ ‘ಹಣಕ್ಕೆ ಉದ್ಯೋಗ’ ಹಗರಣಕ್ಕೆ ಸಂಬಂಧಿಸಿ ಹಣ ಅಕ್ರಮ ವರ್ಗಾವಣೆ ಕಾಯ್ದೆ ಅಡಿಯಲ್ಲಿ ಬಾಲಾಜಿ ಅವರು ಆರೋಪ ಎದುರಿಸುತ್ತಿದ್ದಾರೆ.







