Tamilnadu | SIR ಬಳಿಕ ಸುಮಾರು 97 ಲಕ್ಷ ಮತದಾರರನ್ನು ಅಳಿಸಿ ಹಾಕಿದ ಚುನಾವಣಾ ಆಯೋಗ!

ಚುನಾವಣಾ ಆಯೋಗ | Photo Credit : PTI
ಚೆನ್ನೈ: ತಮಿಳುನಾಡಿನಲ್ಲಿ ಮುಕ್ತಾಯಗೊಂಡ ವಿಶೇಷ ತೀವ್ರ ಮತ ಪಟ್ಟಿ ಪರಿಷ್ಕರಣೆಯ ನಂತರ, ಕರಡು ಮತದಾರರ ಪಟ್ಟಿಯಿಂದ ಒಟ್ಟು 97.37 ಲಕ್ಷ ಮತದಾರರನ್ನು ಕರಡು ಮತದಾರರ ಮತ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ತಮಿಳುನಾಡು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅರ್ಚನಾ ಪಟ್ನಾಯಕ್ ತಿಳಿಸಿದ್ದಾರೆ.
ಹೀಗೆ ಕೈಬಿಡಲಾಗಿರುವ ಮತದಾರರ ಪೈಕಿ ಮೃತಪಟ್ಟವರು, ಸ್ಥಳಾಂತರಗೊಂಡವರು, ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಪಟ್ಟಿಯಲ್ಲಿ ನೋಂದಣಿಗೊಂಡಿರುವವರು ಹಾಗೂ ವಿಶೇಷ ತೀವ್ರ ಮತ ಪಟ್ಟಿ ಪರಿಷ್ಕರಣೆಯ ವೇಳೆ ಗೈರಾಗಿದ್ದವರು ಸೇರಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಅಕ್ಟೋಬರ್ 27, 2025ರಂದು ತಮಿಳುನಾಡು ರಾಜ್ಯದ ಒಟ್ಟು ಮತದಾರರ ಸಂಖ್ಯೆ 6,41,14,587 ಇತ್ತು. ಆದರೆ, ವಿಶೇಷ ತೀವ್ರ ಮತ ಪಟ್ಟಿ ಪರಿಷ್ಕರಣೆಯ ನಂತರ ಶುಕ್ರವಾರ ಪ್ರಕಟವಾಗಿರುವ ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 5,43,76,756 ಮತದಾರರಿದ್ದಾರೆ. ವಿಶೇಷ ತೀವ್ರ ಮತ ಪಟ್ಟಿ ಪರಿಷ್ಕರಣೆಯ ನಂತರ ಪ್ರಕಟವಾಗಿರುವ ಕರಡು ಮತ ಪಟ್ಟಿಯಿಂದ ತೆಗೆದು ಹಾಕಲಾಗಿರುವ ಒಟ್ಟು ಮತದಾರರ ಸಂಖ್ಯೆ 97,37,831 ಆಗಿದೆ.
ಈ ಪೈಕಿ, 26,94,672 ಮತದಾರರನ್ನು ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದೆ. ಅಲ್ಲದೆ, ಸುಮಾರು 66,44,881 ಮತದಾರರು ಸ್ಥಳಾಂತರಗೊಂಡಿದ್ದಾರೆ ಇಲ್ಲವೆ ವಿಶೇಷ ತೀವ್ರ ಮತ ಪಟ್ಟಿ ಪರಿಷ್ಕರಣೆ ಅಭಿಯಾನದ ವೇಳೆ ಗೈರಾಗಿದ್ದಾರೆ ಎನ್ನಲಾಗಿದೆ. ಇನ್ನು ಒಟ್ಟು 3,39,278 ಮತದಾರರು ಒಂದಕ್ಕಿಂತ ಹೆಚ್ಚು ಮತಕ್ಷೇತ್ರಗಳಲ್ಲಿ ನೋಂದಣಿಗೊಂಡಿದ್ದಾರೆ ಎಂದು ಹೇಳಲಾಗಿದೆ.
ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಚೆನ್ನೈ ಜಿಲ್ಲೆಯ 16 ವಿಧಾನಸಭಾ ಕ್ಷೇತ್ರಗಳ ಕರಡು ಮತ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಒಟ್ಟು ಮತದಾರರ ಸಂಖ್ಯೆ 25,76,676 ಆಗಿದೆ. ಈ ಪೈಕಿ, 12,47,690 ಪುರುಷ ಮತದಾರರಿದ್ದರೆ, 13,31,243 ಮಹಿಳಾ ಮತದಾರರಿದ್ದಾರೆ. ಇವರೊಂದಿಗೆ 743 ತೃತೀಯ ಲಿಂಗಿಗಳು ಸೇರಿದ್ದಾರೆ. 14,25,243 ಮತದಾರರನ್ನು ಮರಣ, ಸ್ಥಳಾಂತರ, ಒಂದಕ್ಕಿಂತ ಹೆಚ್ಚು ಮತಕ್ಷೇತ್ರಗಳಲ್ಲಿ ನೋಂದಣಿ ಹಾಗೂ ವಿಶೇಷ ತೀವ್ರ ಮತ ಪಟ್ಟಿ ಪರಿಷ್ಕರಣೆಯ ವೇಳೆ ಗೈರಾಗಿದ್ದರು ಎಂಬ ಕಾರಣಕ್ಕೆ ಕೈಬಿಡಲಾಗಿದೆ.







