Tamil Nadu | ತಿರುವಳ್ಳೂರಿನಲ್ಲಿ ವಲಸೆ ಕಾರ್ಮಿಕನ ಮೇಲೆ ಮಚ್ಚಿನಿಂದ ದಾಳಿ: ಅಪ್ರಾಪ್ತರಿಂದ ಕ್ರೌರ್ಯ, 'ವಿಕ್ಟರಿ ಸಂಕೇತ' ತೋರಿಸಿದ ವಿಡಿಯೋ ವೈರಲ್

Photo Credit : indiatoday.in
ಮಧುರೈ: ಮಧ್ಯಪ್ರದೇಶ ಮೂಲದ ವಲಸೆ ಕಾರ್ಮಿಕನೊಬ್ಬನ ಮೇಲೆ ನಾಲ್ವರು ಅಪ್ರಾಪ್ತ ವಯಸ್ಕರು ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ತಿರುವಳ್ಳೂರು ಜಿಲ್ಲೆಯಲ್ಲಿ ನಡೆದಿದೆ. ದಾಳಿಯ ದೃಶ್ಯಗಳನ್ನು ಆರೋಪಿಗಳೇ ಮೊಬೈಲ್ ಫೋನ್ ನಲ್ಲಿ ಚಿತ್ರೀಕರಿಸಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗಂಭೀರವಾಗಿ ಗಾಯಗೊಂಡಿರುವ ಕಾರ್ಮಿಕನನ್ನು ಸಿರಾಜ್ ಎಂದು ಗುರುತಿಸಲಾಗಿದೆ. ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.
ಪೊಲೀಸರ ಪ್ರಕಾರ, ಸಿರಾಜ್ ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಆರೋಪಿಗಳು ಮಚ್ಚು ತೋರಿಸಿ ಬೆದರಿಕೆ ಹಾಕಿದ್ದಾರೆ. ಈ ಸಂದರ್ಭದಲ್ಲೇ ವಿಡಿಯೋ ಚಿತ್ರೀಕರಣ ನಡೆಸಲಾಗಿದೆ. ಬಳಿಕ ಅವರನ್ನು ರೈಲ್ವೆ ನಿಲ್ದಾಣದ ಸಮೀಪದ ನಿರ್ಜನ ಸ್ಥಳಕ್ಕೆ ಕರೆದೊಯ್ದು ಮಚ್ಚಿನಿಂದ ತೀವ್ರ ಹಲ್ಲೆ ನಡೆಸಲಾಗಿದೆ.
ವೈರಲ್ ಆಗಿರುವ ದೃಶ್ಯಗಳಲ್ಲಿ ಹಲ್ಲೆಯ ಕ್ರೌರ್ಯ ಸ್ಪಷ್ಟವಾಗಿ ಕಾಣುತ್ತಿದ್ದು, ದಾಳಿಯ ನಂತರ ಆರೋಪಿಗಳ ಪೈಕಿ ಒಬ್ಬ ‘ವಿಕ್ಟರಿ’ ಸಂಕೇತವನ್ನು ಪ್ರದರ್ಶಿಸಿರುವುದೂ ದಾಖಲಾಗಿದೆ. ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.





