Tamil Nadu | ಚುನಾವಣೆಯಲ್ಲ, ಪ್ರಜಾಪ್ರಭುತ್ವಕ್ಕಾಗಿ ಯುದ್ಧ: CBI ತನಿಖೆ ನಡುವೆ ಗುಡುಗಿದ ನಟ ವಿಜಯ್

ಟಿವಿಕೆ ಮುಖ್ಯಸ್ಥ ವಿಜಯ್ (Photo: PTI)
ಮಾಮಲ್ಲಾಪುರಂ (ತಮಿಳುನಾಡು), ಜ.25: ಸಿಬಿಐ ವಿಚಾರಣೆ ಮತ್ತು ತನ್ನ ಮುಂಬರುವ ಚಿತ್ರ ‘ಜನ ನಾಯಗನ್’ ಬಿಡುಗಡೆಗೆ ಎದುರಾಗಿರುವ ಅಡೆತಡೆಗಳ ನಡುವೆಯೇ ಖ್ಯಾತ ತಮಿಳು ನಟ-ರಾಜಕಾರಣಿ ಹಾಗೂ ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್ ಅವರು ತಾನು ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ, ಯಾರ ಎದುರೂ ತಲೆಬಾಗುವುದಿಲ್ಲ ಎಂದು ರವಿವಾರ ಇಲ್ಲಿ ಹೇಳಿದ್ದಾರೆ. ತನ್ಮೂಲಕ ತಮ್ಮ ರಾಜಕೀಯ ವಿರೋಧಿಗಳಿಗೆ ಖಡಕ್ ಸಂದೇಶವೊಂದನ್ನು ರವಾನಿಸಿದ್ದಾರೆ.
ಮಾಮಲ್ಲಾಪುರಂನಲ್ಲಿ ಪಕ್ಷದ ಕಾರ್ಯತಂತ್ರ ಸಭೆಯಲ್ಲಿ 3,000ಕ್ಕೂ ಅಧಿಕ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ವಿಜಯ್, ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯನ್ನು ಉಲ್ಲೇಖಿಸಿ, ‘ಇದು ಕೇವಲ ಚುನಾವಣೆಯಲ್ಲ, ಬದಲಾಗಿ ಪ್ರಜಾಪ್ರಭುತ್ವ ಯುದ್ಧವಾಗಿದೆ. ಈ ಯುದ್ಧವನ್ನು ಗೆಲ್ಲಲು ನೀವೇ ನನ್ನ ಕಮಾಂಡೋಗಳು’ ಎಂದು ಹೇಳಿದರು.
ಡಿಎಂಕೆ ಮತ್ತು ಮುಖ್ಯ ಪ್ರತಿಪಕ್ಷ ಎಐಎಡಿಎಂಕೆ ವಿರುದ್ಧ ದಾಳಿ ನಡೆಸಿದ ವಿಜಯ್, ತಮ್ಮ ಪಕ್ಷದ ಹೆಸರಿನಲ್ಲಿ ‘ಅಣ್ಣಾ’ ಇರುವವರು ಸೇರಿದಂತೆ ಇಂದು ರಾಜಕೀಯದಲ್ಲಿರುವವರು ಅಣ್ಣಾದುರೈ ಅವರನ್ನು ಮರೆತಿದ್ದಾರೆ ಎಂದು ಟೀಕಿಸಿದರು. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಸಿ.ಎನ್. ಅಣ್ಣಾದುರೈ ಅವರು ದ್ರಾವಿಡ ರಾಜಕೀಯದ ಪ್ರಮುಖ ಸಿದ್ಧಾಂತಕಾರರಾಗಿದ್ದರು.
ಅಧಿಕಾರದಲ್ಲಿರುವ ಪಕ್ಷಗಳಿಗೆ ಮತಗಟ್ಟೆಗಳು ಬೋಗಸ್ ಮತಗಳನ್ನು ಚಲಾಯಿಸುವ ಕೇಂದ್ರಗಳಾಗಿವೆ ಎಂದ ವಿಜಯ್, ಪ್ರತಿಯೊಂದೂ ಮತವನ್ನು ರಕ್ಷಿಸಿ, ಪ್ರತಿಯೊಬ್ಬರನ್ನೂ ಭೇಟಿಯಾಗಿ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು. ‘ದುಷ್ಟಶಕ್ತಿ (ಡಿಎಂಕೆ)’ ಮತ್ತು ‘ಭ್ರಷ್ಟಶಕ್ತಿ (ಎಐಎಡಿಎಂಕೆ)’ಯನ್ನು ಎದುರಿಸುವ ಧೈರ್ಯ ಟಿವಿಕೆಗೆ ಮಾತ್ರ ಇದೆ ಎಂದು ಹೇಳಿದರು.
ಮುಂಬರುವ ಚುನಾವಣೆಗೆ ಮುನ್ನ ಬೆಂಬಲವನ್ನು ಕ್ರೋಡೀಕರಿಸಲು ಟಿವಿಕೆ ಜ.26ರಿಂದ ರಾಜ್ಯವ್ಯಾಪಿ ಅಭಿಯಾನವನ್ನು ಆರಂಭಿಸಲಿದೆ ಎಂದು ಪಕ್ಷದ ನಾಯಕರು ತಿಳಿಸಿದರು. ಟಿವಿಕೆ ಈವರೆಗೂ ಯಾವುದೇ ಪಕ್ಷದೊಂದಿಗೆ ಮೈತ್ರಿಯನ್ನು ಪ್ರಕಟಿಸಿಲ್ಲ.
‘ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೇ ನಾವು ಏಕಾಂಗಿಯಾಗಿ ಚುನಾವಣೆಯನ್ನು ಗೆಲ್ಲುತ್ತೇವೆ’ ಎಂದು ವಿಜಯ್ ಹೇಳಿದರು.
ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ಕರೂರಿನಲ್ಲಿ ವಿಜಯ್ ರ್ಯಾಲಿ ಸಂದರ್ಭ ಸಂಭವಿಸಿದ್ದ ಕಾಲ್ತುಳಿತದಲ್ಲಿ 41 ಜನರು ಮೃತಪಟ್ಟಿದ್ದರು. ಈ ಸಂಬಂಧ ಅವರನ್ನು ತನಿಖೆಗೊಳಪಡಿಸಿರುವ ಸಿಬಿಐ ದಿಲ್ಲಿಯಲ್ಲಿ ಎರಡು ಸಲ ಅವರ ವಿಚಾರಣೆ ನಡೆಸಿದೆ. ಅವರ ‘ಜನ ನಾಯಗನ್’ ಚಿತ್ರವು ಅದರ ಬಿಡುಗಡೆಗೆ ಸೆನ್ಸಾರ್ ಮಂಡಳಿಯು ತಡೆಯೊಡ್ಡಿದ ಬಳಿಕ ಸುದ್ದಿಯಲ್ಲಿದೆ. ಬಿಡುಗಡೆಗೆ ಅಡೆತಡೆಗಳ ನಿವಾರಣೆಯನ್ನು ಕೋರಿ ಅವರು ನ್ಯಾಯಾಲಯಗಳ ಮೊರೆ ಹೋಗಿದ್ದಾರೆ.







