ತಮಿಳುನಾಡು | ಮೈಕ್ರೊಫೋನ್ ಕೈಕೊಟ್ಟರೂ ಆಡಳಿತಾರೂಢ ಡಿಎಂಕೆ ಮೇಲೆ ಹರಿಹಾಯ್ದ ನಟ ವಿಜಯ್

PC | PTI
ಚೆನ್ನೈ: ತಿರುಚಿರಾಪಳ್ಳಿಯಲ್ಲಿ ಆಯೋಜನೆಗೊಂಡಿದ್ದ ತಮ್ಮ ಪ್ರಪ್ರಥಮ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ತಮಿಳಗ ವೆಟ್ರಿ ಕಳಗಂ ಪಕ್ಷದ ಸಂಸ್ಥಾಪಕ, ನಟ ವಿಜಯ್ ಆಡಳಿತಾರೂಢ ಡಿಎಂಕೆ ವಿರುದ್ಧ ಹರಿಹಾಯ್ದರು. ಈ ವೇಳೆ ಅವರ ಮೈಕ್ರೊಫೋನ್ ಕೈಕೊಟ್ಟ ಘಟನೆಯೂ ನಡೆಯಿತು.
ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ತಮ್ಮ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ನಟ ವಿಜಯ್, “ಅವರು ನಗರ ಬಸ್ ಗಳಲ್ಲಿ ನೀವು ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಿ, ಅದನ್ನು ಉಚಿತ.. ಉಚಿತ ಎಂದು ಪ್ರಚಾರ ಮಾಡುತ್ತಿದ್ದಾರೆ. ಡೀಸೆಲ್ ದರವನ್ನು ತಗ್ಗಿಸುವುದಾಗಿ ಡಿಎಂಕೆ ಹೇಳಿತ್ತು. ಆದರೆ, ಅದನ್ನು ಮಾಡಿದೆಯೆ?” ಎಂದು ಪ್ರಶ್ನಿಸಿದರು.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಕೀಲಡಿ ಪ್ರಾಚ್ಯ ಸ್ಥಳ, ಕಚ್ಚತ್ತೀವು, ನೀಟ್ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ, 2020 ಅನ್ನು ಜಾರಿಗೊಳಿಸದ ಕಾರಣಕ್ಕೆ ನಿಧಿಯ ನಿರಾಕರಣೆ ವಿಷಯಗಳನ್ನು ಪ್ರಸ್ತಾಪಿಸಿದರು.
ಡಿಎಂಕೆ ಪಕ್ಷ ನೀಡಿದ್ದ ಎರಡು ಡಜನ್ ಭರವಸೆಗಳನ್ನು ವಿಜಯ್ ಪಟ್ಟಿ ಮಾಡಿದರು ಹಾಗೂ ಅವು ಯಾಕೆ ಜಾರಿಯಾಗಿಲ್ಲ ಎಂದು ಪ್ರಶ್ನಿಸಿದರು. “ಬಿಜೆಪಿ ತಮಿಳುನಾಡಿಗೆ ವಿಶ್ವಾಸ ದ್ರೋಹವೆಸಗಿದ್ದರೆ, ಡಿಎಂಕೆ ನಂಬಿಕೆ ದ್ರೋಹವೆಸಗಿದೆ. ಎರಡೂ ಒಂದೇ ಆಗಿದ್ದು, ಅವನ್ನು ಪ್ರಜಾಪ್ರಭುತ್ವದಲ್ಲಿನ ಅಪರಾಧಗಳು ಎಂದೇ ಪರಿಗಣಿಸಬೇಕು. ಜನರನ್ನು ಹೇಗೆ ವಂಚಿಸಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಇಬ್ಬರಿಗೂ ತಿಳಿದಿದೆ. ಅವರಿಬ್ಬರ ನಡುವೆ ಯಾಕೆ ಗುಪ್ತ ಒಪ್ಪಂದವಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ” ಎಂದು ಅವರು ಕರೆ ನೀಡಿದರು.
ಒಂದು ವೇಳೆ ನನ್ನ ತಮಿಳಗ ವೆಟ್ರಿ ಕಳಗಂ ಪಕ್ಷವೇನಾದರೂ ಅಧಿಕಾರಕ್ಕೆ ಬಂದರೆ, ಜಾರಿಗೊಳಿಸಲು ಸಾಧ್ಯವಿರುವ ಭರವಸೆಗಳನ್ನು ಮಾತ್ರ ನೀಡುವುದಾಗಿ ನಟ, ರಾಜಕಾರಣಿ ವಿಜಯ್ ಘೋಷಿಸಿದರು.







