2026ರ ತಮಿಳುನಾಡು ವಿಧಾನಸಭಾ ಚುನಾವಣೆ : ರಾಜ್ಯಾದ್ಯಂತ ಬೃಹತ್ ಪ್ರಚಾರ ಆರಂಭಿಸಿದ ನಟ ವಿಜಯ್

PC | PTI
ತಿರುಚ್ಚಿ: ಖ್ಯಾತ ನಟ-ರಾಜಕಾರಣಿ ಹಾಗೂ ತಮಿಳಿಗ ವೆಟ್ರಿ ಕಳಗಂ(ಟಿವಿಕೆ) ಸ್ಥಾಪಕ ವಿಜಯ್ ಅವರು 2026ರ ತಮಿಳುನಾಡು ವಿಧಾನಸಭಾ ಚುನಾವಣೆಗಾಗಿ ಶನಿವಾರ ತಿರುಚ್ಚಿಯಿಂದ ಪ್ರಚಾರ ಅಭಿಯಾನವನ್ನು ಆರಂಭಿಸಿದರು.
ಬೆಳಿಗ್ಗೆ ಚೆನ್ನೈನಿಂದ ಇಲ್ಲಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರಿಗೆ ಟಿವಿಕೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಅದ್ದೂರಿ ಸ್ವಾಗತವನ್ನು ಕೋರಿದರು.
ಮರಕ್ಕಡೈ ಎಂಜಿಆರ್ ಪ್ರತಿಮೆ ಬಳಿ ಬೆಳಿಗ್ಗೆ 10:35ಕ್ಕೆ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಬೇಕಿದ್ದ ವಿಜಯ್ ಅವರ ಪ್ರಚಾರ ವಾಹನ ರಸ್ತೆಯುದ್ದಕ್ಕೂ ಮಹಿಳೆಯರೂ ಒಳಗೊಂಡಂತೆ ಕಿಕ್ಕಿರಿದು ಸೇರಿದ್ದ ಜನಸಂದಣಿ ಮತ್ತು ಟ್ರಾಫಿಕ್ ಜಾಮ್ನಿಂದಾಗಿ ನಾಲ್ಕು ಗಂಟೆಗಳಷ್ಟು ವಿಳಂಬವಾಗಿ ನಿಗದಿತ ತಾಣವನ್ನು ತಲುಪಿತ್ತು.
ವಿಜಯ್ ನೋಡಲು ಅಭಿಮಾನಿಗಳು ರಸ್ತೆಬದಿಯ ಮರಗಳು, ಕಂಬಗಳು ಮತ್ತು ಇತರ ಕಟ್ಟಡಗಳನ್ನು ಹತ್ತಿದ್ದರು. ಫ್ಲೈಓವರ್ನ ಪಾರ್ಶ್ವಗಳಲ್ಲೂ ಜನರು ಜಮಾಯಿಸಿದ್ದರು.
ಕಡು ಹಳದಿ ವೇಷಭೂಷಣಗಳನ್ನು ಧರಿಸಿದ್ದ ತಂಡಗಳು ಸಾಂಸ್ಕೃತಿಕ ಗೀತೆಗಳನ್ನು ಪ್ರದರ್ಶಿಸಿದ್ದು,ಮಹಿಳೆಯರು ಪೂರ್ಣಕುಂಭಗಳೊಂದಿಗೆ ವಿಜಯರನ್ನು ಸ್ವಾಗತಿಸಿದರು.
ಸಭೆ ನಡೆಯಲಿದ್ದ ಸ್ಥಳದಲ್ಲಿ ಬೆಳಗ್ಗಿನಿಂದಲೇ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಹಲವಾರು ಕಾರ್ಯಕರ್ತರು ಬಳಲಿಕೆಯಿಂದ ಕುಸಿದು ಬಿದ್ದಿದ್ದು ಅವರನ್ನು ಸಮೀಪದ ಆಸ್ಪತ್ರೆಗಳಿಗೆ ಸಾಗಿಸಲಾಗಿತ್ತು.
ಮಾರ್ಗದುದ್ದಕ್ಕೂ ವಿಜಯ ತನ್ನ ಅಭಿಮಾನಿಗಳಿಗೆ ಬಿಳಿಯ ಶರ್ಟ್ಗಳು ಮತ್ತು ತಂಪು ಕನ್ನಡಕಗಳನ್ನು ವಿತರಿಸಿದರು.
ಟಿವಿಕೆ ಸ್ಥಾಪನೆಯ ಬಳಿಕ ಇದು ವಿಜಯ ಅವರ ಮೊದಲ ಪ್ರಚಾರ ಪ್ರವಾಸವಾಗಿದೆ.







