ರಾಜ್ಯಪಾಲರು ಸಹಿ ಹಾಕದೆ ಮರಳಿಸಿದ್ದ ಮಸೂದೆಗಳನ್ನು ಮರು ಅಂಗೀಕರಿಸಿದ ತಮಿಳುನಾಡು ವಿಧಾನಸಭೆ

ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ (PTI)
ಚೆನ್ನೈ: ಶನಿವಾರ ನಡೆದ ವಿಶೇಷ ಅಧಿವೇಶನದಲ್ಲಿ ರಾಜ್ಯಪಾಲ ಆರ್.ಎನ್. ರವಿ ಅವರು ಹಿಂದಿರುಗಿಸಿದ 10 ಮಸೂದೆಗಳನ್ನು ತಮಿಳುನಾಡು ವಿಧಾನಸಭೆ ಮತ್ತೆ ಅಂಗೀಕರಿಸಿದೆ.
ಬೆಳಗ್ಗೆ 10 ಗಂಟೆಗೆ ಸದನದ ಕಲಾಪ ಆರಂಭವಾಗುತ್ತಿದ್ದಂತೆ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕರು ಸಭಾತ್ಯಾಗ ನಡೆಸಿ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.
ವಿಶೇಷ ಅಧಿವೇಶನದಲ್ಲಿ ಕಾನೂನು, ಕೃಷಿ ಮತ್ತು ಉನ್ನತ ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳನ್ನು ಒಳಗೊಂಡಿರುವ ಮಸೂದೆಗಳನ್ನು ಸದನವು ಅಂಗೀಕರಿಸಿದೆ.
ವಿಧಾನಸಭೆಯಲ್ಲಿ ಮಾತನಾಡಿದ ಎಂ.ಕೆ. ಸ್ಟಾಲಿನ್, ಚುನಾಯಿತ ಜನಪ್ರತಿನಿಧಿಗಳನ್ನು ಒಳಗೊಂಡ ವಿಧಾನಸಭೆ ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡುವುದು ರಾಜ್ಯಪಾಲರ ಕರ್ತವ್ಯ. ಅವರು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಅವರು ಅದನ್ನು ಸರ್ಕಾರದ ಗಮನಕ್ಕೆ ತಂದು ಇತ್ಯರ್ಥ ಮಾಡಬಹುದು ಎಂದು ಹೇಳಿದ್ದಾರೆ.
"ಈ ಹಿಂದೆ, ರಾಜ್ಯಪಾಲರು ಕೆಲವು ಮಸೂದೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದಾಗ, ರಾಜ್ಯವು ತಕ್ಷಣವೇ ಪ್ರತಿಕ್ರಿಯೆಯನ್ನು ನೀಡಿತ್ತು. ರಾಜ್ಯಪಾಲರು ಕೇಳಿದ ಸ್ಪಷ್ಟೀಕರಣವನ್ನು ಸರ್ಕಾರ ನೀಡದೆ ಇರುವ ಉದಾಹರಣೆ ಇಲ್ಲ, ”ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
10 ವಿಧೇಯಕಗಳಿಗೆ ರಾಜ್ಯಪಾಲರ ಒಪ್ಪಿಗೆ ತಡೆ ಹಿಡಿದಿರುವ ಕ್ರಮ ತಮಿಳುನಾಡು ಜನತೆಗೆ ಮಾಡಿದ ಅವಮಾನ ಮತ್ತು ತಮಿಳುನಾಡು ವಿಧಾನಸಭೆಗೆ ಮಾಡಿದ ಅವಮಾನವಲ್ಲದೆ ಬೇರೇನೂ ಅಲ್ಲ ಎಂದು ಅವರು ಹೇಳಿದ್ದಾರೆ.
ರಾಜ್ಯಪಾಲರು ಜನರು, ಪ್ರಜಾಪ್ರಭುತ್ವ, ಕಾನೂನು ಮತ್ತು ಆತ್ಮಸಾಕ್ಷಿಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ತಮಿಳುನಾಡು ರಾಜ್ಯಪಾಲರಾಗಿ ನೇಮಕಗೊಂಡ ವ್ಯಕ್ತಿ ರಾಜ್ಯದ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕು. ರಾಜ್ಯವು ಹೊಸ ರೈಲ್ವೆ ಯೋಜನೆಗಳನ್ನು ಪಡೆಯಲು ಅವರು ಸಹಾಯ ಮಾಡಬಹುದು. ಆದರೆ ಇದೆಲ್ಲವನ್ನೂ ಮಾಡುವ ಬದಲು ರಾಜ್ಯಪಾಲರು ಪ್ರತಿದಿನ ರಾಜ್ಯದ ಯೋಜನೆಗಳನ್ನು ಹೇಗೆ ಸ್ಥಗಿತಗೊಳಿಸಬಹುದು ಎಂದು ಯೋಚಿಸುತ್ತಾರೆ ಎಂದು ಸ್ಟಾಲಿನ್ ಕಿಡಿ ಕಾರಿದ್ದಾರೆ.
ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರು ಒಪ್ಪಿಗೆಗಾಗಿ ಸರ್ಕಾರದಿಂದ ಕಳುಹಿಸಲಾದ ಮಸೂದೆಗಳನ್ನು ಗುರುವಾರ ಹಿಂದಿರುಗಿಸಿದ ನಂತರ ತಮಿಳುನಾಡು ವಿಧಾನಸಭೆ ಶನಿವಾರ ತುರ್ತು ಅಧಿವೇಶನವನ್ನು ಕರೆದಿತ್ತು.
ಈ ಹಿಂದೆ, ಡಿಎಂಕೆ ಆಡಳಿತವು ವಿಧಾನಸಭೆ ಅಂಗೀಕರಿಸಿದ ಮಸೂದೆಗಳನ್ನು ರಾಜಭವನವನ್ನು ನಡೆಸುತ್ತಿದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ಗೆ ಮೊರೆ ಹೋಗಿತ್ತು.
ನವೆಂಬರ್ 10 ರಂದು, ರಾಜ್ಯಪಾಲ ರವಿ ಅವರು ವಿಧಾನಸಭೆ ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡುವಲ್ಲಿ ವಿಳಂಬ ಮಾಡಿರುವುದನ್ನು ʼಗಂಭೀರ ಕಳವಳಕಾರಿ ವಿಷಯʼ ಎಂದು ಸುಪ್ರೀಂ ಕೋರ್ಟ್ ಬಣ್ಣಿಸಿತ್ತು.







