ಮೂರೂವರೆ ವರ್ಷದ ಬಾಲಕಿಯ ವರ್ತನೆಯೇ ಲೈಂಗಿಕ ದೌರ್ಜನ್ಯಕ್ಕೆ ಕಾರಣ ಎಂದ ತಮಿಳುನಾಡು ಜಿಲ್ಲಾಧಿಕಾರಿ!
ಎ.ಪಿ.ಮಹಾಭಾರತಿಯನ್ನು ವರ್ಗಾವಣೆಗೊಳಿಸಿದ ತಮಿಳುನಾಡು ಸರಕಾರ

Photo : mayiladuthurai.nic.in
ಚೆನ್ನೈ: ಬಾಲಕಿ ತೋರಿದ ವರ್ತನೆ ಲೈಂಗಿಕ ದೌರ್ಜನ್ಯಕ್ಕೆ ಕಾರಣವಾಗಿದೆ ಎಂದು ಮೂರೂವರೆ ವರ್ಷದ ಲೈಂಗಿಕ ದೌರ್ಜನ್ಯ ಸಂತ್ರಸ್ತ ಬಾಲಕಿಯ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಮಯಿಲಾಡತುರೈ ಜಿಲ್ಲಾಧಿಕಾರಿ ಎ.ಪಿ.ಮಹಾಭಾರತಿಯನ್ನು ತಮಿಳುನಾಡು ಸರಕಾರ ವರ್ಗಾವಣೆಗೊಳಿಸಿದೆ.
ಮಯಿಲಾಡತುರೈನಲ್ಲಿ ಮೂರೂವರೆ ವರ್ಷದ ಬಾಲಕಿಯ ಮೇಲೆ 16 ವರ್ಷದ ಬಾಲಕನೊಬ್ಬ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಕೇಳಿ ಬಂದಿದ್ದು, ಈ ಕುರಿತು ವ್ಯಾಪಕ ಸಾರ್ವತ್ರಿಕ ಆಕ್ರೋಶ ವ್ಯಕ್ತವಾಗಿದೆ.
ಶುಕ್ರವಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಮಹಾಭಾರತಿ, ಮೂರೂವರೆ ವರ್ಷದ ಬಾಲಕಿ ಕೆಟ್ಟದಾಗಿ ನಡೆದುಕೊಂಡಿದ್ದು, ನನಗೆ ದೊರೆತಿರುವ ವರದಿಯ ಪ್ರಕಾರ, ಬಾಲಕಿಯು ಆರೋಪಿಯ ಮುಖಕ್ಕೆ ಉಗುಳಿದ್ದಾಳೆ. ಇದು ಲೈಂಗಿಕ ದೌರ್ಜನ್ಯಕ್ಕೆ ಕಾರಣವಾಗಿರಬಹುದು. ಹೀಗಾಗಿ ಪೋಕ್ಸೊ ಕಾಯ್ದೆಯ ಎರಡೂ ಮಗ್ಗಲುಗಳನ್ನು ಪರಿಗಣಿಸಬೇಕಾದುದು ಮುಖ್ಯವಾಗಿದೆ” ಎಂದು ಅಭಿಪ್ರಾಯ ಪಟ್ಟಿದ್ದರು.
ತಕ್ಷಣವೇ ಜಿಲ್ಲಾಧಿಕಾರಿ ಮಹಾಭಾರತಿಯ ಈ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಸಾರ್ವತ್ರಿಕ ಖಂಡನೆಗೆ ಗುರಿಯಾಗಿದೆ. ತನ್ನ ಕೃತ್ಯದ ಪರಿಣಾಮಗಳು ಬಾಲಕಿಗೆ ಹೇಗೆ ತಿಳಿದಿರಲು ಸಾಧ್ಯ ಎಂದು ಪ್ರಶ್ನಿಸಿರುವ ಹಲವು ಸಾಮಾಜಿಕ ಮಾಧ್ಯಮ ಬಳಕೆದಾರರು, ಈ ಕುರಿತು ಜಿಲ್ಲಾಧಿಕಾರಿ ಯೋಚಿಸದಿರುವ ಕುರಿತು ಆಘಾತ ವ್ಯಕ್ತಪಡಿಸಿದ್ದಾರೆ.
ಈ ಹೇಳಿಕೆಯ ಕುರಿತು ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೆ, ಜಿಲ್ಲಾಧಿಕಾರಿ ಮಹಾಭಾರತಿಯನ್ನು ಮಯಿಲಾಡತುರೈ ಜಿಲ್ಲೆಯಿಂದ ವರ್ಗಾಯಿಸಿರುವ ತಮಿಳುನಾಡು ಸರಕಾರ, ಅವರನ್ನು ಯಾವುದೇ ಹೊಸ ಹುದ್ದೆಗೆ ನಿಯೋಜಿಸಿಲ್ಲ ಎಂದು ವರದಿಯಾಗಿದೆ.







