ಆಧ್ಯಾತ್ಮಿಕ ಕಾರ್ಯಕ್ರಮದ ಕುರಿತು ವಿವಾದ: ಶಾಲಾ ಕಾರ್ಯಕ್ರಮಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಿರುವ ತಮಿಳುನಾಡು ಸರಕಾರ

ಎಂ.ಕೆ.ಸ್ಟಾಲಿನ್ | PC: PTI
ಚೆನ್ನೈ: ರಾಜ್ಯಾದ್ಯಂತ ಇರುವ ಶಾಲೆಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಕ್ರಮಬದ್ಧಗೊಳಿಸಲು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಶುಕ್ರವಾರ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪ್ರಕಟಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಎಂ.ಕೆ.ಸ್ಟಾಲಿನ್, "ವಿದ್ಯಾರ್ಥಿಗಳಲ್ಲಿ ಪ್ರಗತಿಪರ ಚಿಂತನೆಗಳನ್ನು ಬೆಳೆಸಲು ಹಾಗೂ ವೈಜ್ಞಾನಿಕ ಮನೋಭಾವವನ್ನು ಬಿತ್ತಲು ರಾಜ್ಯಾದ್ಯಂತ ಇರುವ ಶಾಲೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಕ್ರಮಬದ್ಧಗೊಳಿಸಲು ನೂತನ ಮಾರ್ಗಸೂಚಿಗಳನ್ನು ರಚಿಸಲು ಸೂಚನೆ ನೀಡಲಾಗಿದೆ" ಎಂದು ಹೇಳಿದ್ದಾರೆ.
ಚೆನ್ನೈನ ಅಶೋಕ್ ನಗರ್ ಶಾಲೆಯೊಂದರಲ್ಲಿ ಅತಿಥಿಯಾಗಿ ಆಹ್ವಾನಗೊಂಡಿದ್ದ ವ್ಯಕ್ತಿಯೊಬ್ಬರು ದೃಷ್ಟಿಮಾಂದ್ಯ ಶಿಕ್ಷಕರೊಬ್ಬರನ್ನು ಅವಮಾನಿಸಿದ್ದ ಘಟನೆ ನಡೆದಿತ್ತು. ಭೂತಕಾಲದ ಜೀವನದ ಬಗೆಗಿನ ಕುರಿತು ಆಹ್ವಾನಿತ ಅತಿಥಿಯು ಅವೈಜ್ಞಾನಿಕ ಬೋಧನೆ ಮಾಡಿದ್ದರಿಂದ, ಇಬ್ಬರ ನಡುವೆ ವಾಗ್ವಾದವೇರ್ಪಟ್ಟಿತ್ತು. ಇದು ವಿವಾದದ ಸ್ವರೂಪಕ್ಕೆ ತಿರುಗಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಂದ ಮೇಲಿನ ಹೇಳಿಕೆ ಹೊರ ಬಿದ್ದಿದೆ.
ವಿದ್ಯಾರ್ಥಿಗಳಿಗೆ ತಮ್ಮ ಪಠ್ಯಪುಸ್ತಕದಲ್ಲಿರುವ ವೈಜ್ಞಾನಿಕ ಮನೋಭಾವಗಳು ಅವರಿಗೆ ಅಗತ್ಯವಾಗಿವೆ. ವಿದ್ಯಾರ್ಥಿಗಳಲ್ಲಿ ಭವಿಷ್ಯದ ಸವಾಲುಗಳನ್ನು ಎದುರಿಸುವ ಹಾಗೂ ಸ್ವಯಂ ಆತ್ಮವಿಶ್ವಾಸ ಬೆಳೆಸಿಕೊಳ್ಳುವ ಪಾಠಗಳನ್ನು ಶಿಕ್ಷಕರು ಬಿತ್ತಬೇಕಿದೆ. ವಿವಿಧ ಜ್ಞಾನ ಶಿಸ್ತುಗಳು ಹಾಗೂ ಬುದ್ಧಿಜೀವಿಗಳಿಂದ ಶಾಲಾ ಶಿಕ್ಷಣ ಇಲಾಖೆಯು ಅಗತ್ಯವಿರುವ ರಿಫ್ರೆಶರ್ ಕೋರ್ಸ್ಗಳನ್ನು ಆಯೋಜಿಸಲು ಕ್ರಮ ತೆಗೆದುಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ವಿದ್ಯಾರ್ಥಿಗಳಲ್ಲಿ ವೈಯಕ್ತಿಕ ಬೆಳವಣಿಗೆ, ನೈತಿಕತೆ ಹಾಗೂ ಸಾಮಾಜಿಕ ಬೆಳವಣಿಗೆಯನ್ನು ಬಿತ್ತುವ ಗುರಿಯನ್ನು ಈ ಯೋಜನೆ ಹೊಂದಿದೆ. ಈ ಬೆಳವಣಿಗೆಯು ವಿಜ್ಞಾನವನ್ನು ಆಧರಿಸಿರಲಿದೆ ಎಂದು ಸ್ಟಾಲಿನ್ ಅಭಿಪ್ರಾಯ ಪಟ್ಟಿದ್ದಾರೆ.







