ಕೋಲ್ಡ್ರಿಫ್ ತಯಾರಕ ಶ್ರೀಸನ್ ಫಾರ್ಮಾದ ಪರವಾನಿಗೆ ರದ್ದುಗೊಳಿಸಿದ ತಮಿಳುನಾಡು ಸರಕಾರ

Photo Credit : NDTV
ಚೆನ್ನೈ,ಅ.13: ಮಧ್ಯಪ್ರದೇಶದಲ್ಲಿ 22 ಮಕ್ಕಳ ಸಾವಿಗೆ ಕಾರಣವಾದ ಕಲುಷಿತ ಕೆಮ್ಮಿನ ಸಿರಪ್ ಕೋಲ್ಡ್ರಿಫ್ ತಯಾರಿಕೆಗೆ ಶ್ರೀಸನ್ ಫಾರ್ಮಾಸ್ಯೂಟಿಕಲ್ಸ್ ಗೆ ನೀಡಿದ್ದ ಪರವಾನಿಗೆಯನ್ನು ತಮಿಳುನಾಡು ಸರಕಾರವು ಸೋಮವಾರ ರದ್ದುಗೊಳಿಸಿದೆ.
ತಯಾರಿಕೆ ಪರವಾನಿಗೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಮತ್ತು ಕಂಪನಿಯನ್ನು ಮುಚ್ಚಲಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆಯು ಹೇಳಿಕೆಯಲ್ಲಿ ತಿಳಿಸಿದೆ.
ಮಧ್ಯಪ್ರದೇಶದ ವಿಶೇಷ ತನಿಖಾ ತಂಡವು ಕಳೆದ ವಾರ ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿನ ಶ್ರೀಸನ್ ಫಾರ್ಮಾದ ಮಾಲಿಕ ಜಿ.ರಂಗನಾಥನ್ ರನ್ನು ಅವರ ಚೆನ್ನೈ ನಿವಾಸದಿಂದ ಬಂಧಿಸಿತ್ತು. 2022ರ ಬಳಿಕ ಔಷಧಿ ಘಟಕದ ತಪಾಸಣೆ ನಡೆಸುವಲ್ಲಿ ವೈಫಲ್ಯಕ್ಕಾಗಿ ಕಾಂಚೀಪುರಂನಲ್ಲಿಯ ರಾಜ್ಯ ಔಷಧಿ ನಿರೀಕ್ಷಕರನ್ನು ತಮಿಳುನಾಡು ಸರಕಾರವು ಅಮಾನತುಗೊಳಿಸಿದೆ.
ಮಧ್ಯಪ್ರದೇಶ ಔಷಧಿ ಪ್ರಾಧಿಕಾರವು ಅ.1ರಂದು ಮಾಹಿತಿಯನ್ನು ನೀಡಿದ ಬಳಿಕ ತನಿಖೆಯನ್ನು ಕೈಗೊಂಡಿದ್ದ ತಮಿಳುನಾಡು ಅದೇ ಬ್ಯಾಚ್ನ ಕೆಮ್ಮಿನ ಸಿರಪ್ ಮಾದರಿಗಳನ್ನು ಪರೀಕ್ಷಿಸಿ,ಅದು ಕಲುಷಿತಗೊಂಡಿದ್ದನ್ನು ಖಚಿತಪಡಿಸಿಕೊಂಡಿತ್ತು. ಪರೀಕ್ಷಿಸಲಾದ ಸ್ಯಾಂಪಲ್ ಗಳಲ್ಲಿ ಶೇ.48.6ರಷ್ಟು ವಿಷಕಾರಿ ರಾಸಾಯನಿಕ ಡೈಎಥಿಲೀನ್ ಗ್ಲೈಕಾಲ್ ಪತ್ತೆಯಾಗಿತ್ತು. ಇದು ಅನುಮತಿಸಲಾಗಿದ್ದ ಮಿತಿಗಿಂತ 486 ಪಟ್ಟು ಅಧಿಕವಾಗಿತ್ತು. ಈ ಬಗ್ಗೆ ಅದು ಮಧ್ಯಪ್ರದೇಶ ಮತ್ತು ಕೇಂದ್ರ ಆರೋಗ್ಯ ಸಚಿವಾಲಯ,ಸಿ ರಪ್ ಪೂರೈಕೆಯಾಗಿದ್ದ ಒಡಿಶಾ ಮತ್ತು ಪುದುಚೇರಿ ರಾಜ್ಯಗಳಿಗೆ ಮಾಹಿತಿ ನೀಡಿತ್ತು.
ಅ.1ರಂದು ಮಧ್ಯಪ್ರದೇಶ ಸರಕಾರದಿಂದ ಎಚ್ಚರಿಕೆ ಸ್ವೀಕರಿಸಿದ ತಕ್ಷಣ ಸರಕಾರವು ಖಾಸಗಿ ಸಂಸ್ಥೆಗಳು ಈ ಕೆಮ್ಮಿನ ಸಿರಪ್ ಬಳಸುವುದನ್ನು ತಡೆಯಲು ಅದರ ಮಾರಾಟವನ್ನು ನಿಷೇಧಿಸಿತ್ತು ಹಾಗೂ ಅ.3ರಂದು ಉತ್ಪಾದನೆಯನ್ನು ಸ್ಥಗಿತಗೊಳಿಸುವಂತೆ ಶ್ರೀಸನ್ ಫಾರ್ಮಾಕ್ಕೆ ಆದೇಶಿಸಿತ್ತು.
ರಾಜ್ಯದಲ್ಲಿಯ ಎಲ್ಲ ಸರಕಾರಿ ಆಸ್ಪತ್ರೆಗಳು ತಮಿಳುನಾಡು ವೈದ್ಯಕೀಯ ಸೇವೆಗಳ ನಿಗಮದಿಂದ ಔಷಧಿಗಳನ್ನು ಪಡೆದುಕೊಳ್ಳುವುದರಿಂದ ತಮಿಳುನಾಡು ಸರಕಾರವು ಕೋಲ್ಡ್ರಿಫ್ ಸಿರಪ್ನ್ನು ಖರೀದಿಸಿರಲಿಲ್ಲ.







