ಕರೂರು ಕಾಲ್ತುಳಿತ | “ಸಿಎಂ ಸರ್, ನಿಮಗೆ ಸೇಡು ಇದ್ದರೆ ನನ್ನೊಂದಿಗೆ ತೀರಿಸಿಕೊಳ್ಳಿ": ನಟ ವಿಜಯ್ ವೀಡಿಯೊ ಸಂದೇಶ

ಚೆನ್ನೈ, ಸೆ. 30: ಕರೂರಿನಲ್ಲಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ರ‍್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 41 ಮಂದಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಟಿವಿಕೆ ಮುಖ್ಯಸ್ಥ ಹಾಗೂ ನಟ-ರಾಜಕಾರಣಿ ವಿಜಯ್ ತಮ್ಮ ಮೊದಲ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ತೀವ್ರ ದುಃಖ ವ್ಯಕ್ತಪಡಿಸಿರುವ ನಟ ವಿಜಯ್ , “ಜನರು ನನ್ನನ್ನು ನೋಡಲು ಬಂದಿದ್ದರು. ಅವರ ಸುರಕ್ಷತೆಯನ್ನು ಖಾತ್ರಿಪಡಿಸಲು ಪೊಲೀಸರು ಹಾಗೂ ನಾನು ಮುನ್ನೆಚ್ಚರಿಕೆ ತೆಗೆದುಕೊಂಡಿದ್ದರೂ ದುರಂತ ಸಂಭವಿಸಿದೆ. ನನ್ನ ಹೃದಯ ನೋವುಗಳಿಂದ ತುಂಬಿದೆ” ಎಂದು ಹೇಳಿದರು.
ತಮ್ಮ ಪಕ್ಷದ ನಾಯಕರ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಕುರಿತು ಆಕ್ರೋಶ ವ್ಯಕ್ತಪಡಿಸಿದ ಅವರು, “ನಾವು ಯಾವುದೇ ತಪ್ಪು ಮಾಡಿಲ್ಲ. ಸಿಎಂ ಸರ್, ಸೇಡು ತೀರಿಸಿಕೊಳ್ಳಲು ಬಯಸಿದರೆ ನನ್ನನ್ನು ಹುಡುಕಿ. ನಿಮ್ಮ ಸೇಡು ತೀರಿಸಿಕೊಳ್ಳಿ. ನನ್ನ ಸಹೋದ್ಯೋಗಿಗಳನ್ನು ಮುಟ್ಟಬೇಡಿ. ನಾನು ಮನೆಯಲ್ಲಿರುತ್ತೇನೆ ಅಥವಾ ಕಚೇರಿಯಲ್ಲಿರುತ್ತೇನೆ” ಎಂದು ಸ್ಪಷ್ಟ ಸಂದೇಶ ನೀಡಿದರು.
ರಾಜಕೀಯ ಪಿತೂರಿಯ ಬಗ್ಗೆ ಸಂದೇಹ ವ್ಯಕ್ತಪಡಿಸಿದ ವಿಜಯ್, “ನಾವು ಐದು ಜಿಲ್ಲೆಗಳಲ್ಲಿ ಪ್ರಚಾರ ಮಾಡಿದ್ದೇವೆ. ಆದರೆ ಏಕೆ ಕರೂರಿನಲ್ಲಿ ಮಾತ್ರ ಈ ದುರಂತ? ಜನರಿಗೆ ಸತ್ಯ ಗೊತ್ತಿದೆ, ಅವರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಶೀಘ್ರದಲ್ಲೇ ಸತ್ಯ ಹೊರಬರುತ್ತದೆ” ಎಂದು ಹೇಳಿದರು.
ದುರಂತದಿಂದ ಸಂತ್ರಸ್ತ ಕುಟುಂಬಗಳಿಗೆ ಸಂತಾಪ ಸೂಚಿಸಿದ ವಿಜಯ್, “ಅನೇಕ ಕುಟುಂಬಗಳು ದುಃಖದಲ್ಲಿವೆ. ಎಲ್ಲರೂ ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ನಾನು ಆದಷ್ಟು ಬೇಗ ಭೇಟಿಯಾಗುತ್ತೇನೆ” ಎಂದು ಭರವಸೆ ನೀಡಿದರು.
ಸಂದೇಶದ ಕೊನೆಯಲ್ಲಿ ಅವರು, “ನಮ್ಮ ರಾಜಕೀಯ ಪ್ರಯಾಣ ಇನ್ನಷ್ಟು ಶಕ್ತಿ ಮತ್ತು ಧೈರ್ಯದಿಂದ ಮುಂದುವರಿಯಲಿದೆ. ನನ್ನ ಪರವಾಗಿ ನಿಂತ ಎಲ್ಲರಿಗೂ ಧನ್ಯವಾದಗಳು” ಎಂದು ಮಾತು ಮುಗಿಸಿದ್ದಾರೆ.
— TVK Vijay (@TVKVijayHQ) September 30, 2025







