ತಮಿಳುನಾಡು ಎಸ್ಐಆರ್| ಹೊಂದಿಕೆಯಾಗದ ಹೆಸರುಗಳನ್ನು ಪ್ರಕಟಿಸುವಂತೆ ಸುಪ್ರೀಂ ಕೋರ್ಟ್ ಆದೇಶ

ಸುಪ್ರೀಂ ಕೋರ್ಟ್ | Photo Credit : PTI
ಹೊಸದಿಲ್ಲಿ,ಜ. 29: ತಮಿಳುನಾಡಿನ ಮತದಾರರ ಪಟ್ಟಿಯಲ್ಲಿರುವ ಹೊಂದಿಕೆಯಾಗದ ಹೆಸರುಗಳನ್ನು ಪ್ರದರ್ಶಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಭಾರತೀಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಹಲವು ಅರ್ಜಿಗಳ ವಿಚಾರಣೆ ನಡೆಸಿದ ಸರ್ವೋಚ್ಛ ನ್ಯಾಯಾಲಯ ಈ ನಿರ್ದೇಶನ ನೀಡಿದೆ.
ಹೊಂದಿಕೆಯಾಗದ ಹೆಸರುಗಳನ್ನು ಒಳಗೊಂಡ ಪಟ್ಟಿಗಳನ್ನು ತಮಿಳುನಾಡಿನ ಗ್ರಾಮ ಪಂಚಾಯತ್ ಭವನಗಳು, ತಾಲೂಕು ಕಚೇರಿಗಳು ಮತ್ತು ನಗರ ಪ್ರದೇಶಗಳ ವಾರ್ಡ್ ಕಚೇರಿಗಳಲ್ಲಿ ಪ್ರದರ್ಶಿಸಬೇಕು ಎಂದು ಮುಖ್ಯ ನ್ಯಾಯಾಧೀಶರಾದ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಯಮಲ್ಯ ಬಾಗ್ಚಿ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿದೆ. ಹೊಂದಿಕೆಯಾಗದ ಹೆಸರುಗಳ ಪಟ್ಟಿಗಳಲ್ಲಿ ಹೆಸರು ಇರುವವರು 10 ದಿನಗಳ ಅವಧಿಯಲ್ಲಿ ತಮ್ಮ ದಾಖಲೆಗಳು/ಆಕ್ಷೇಪಣೆಗಳನ್ನು ಸ್ವತಃ ಅಥವಾ ಪ್ರತಿನಿಧಿಗಳ ಮೂಲಕ ಸಲ್ಲಿಸಬಹುದಾಗಿದೆ ಎಂಬುದಾಗಿ ಸುಪ್ರೀಂ ಕೊರ್ಟ್ ತಿಳಿಸಿತು. ಆಕ್ಷೇಪಣೆಗಳನ್ನು ಉಪ ವಿಭಾಗೀಯ ಮಟ್ಟದ ಕಚೇರಿಗಳಲ್ಲಿ ಸಲ್ಲಿಸಬಹುದಾಗಿದೆ ಎಂದು ಹೇಳಿದೆ.
ಈ ಪಟ್ಟಿಗಳಲ್ಲಿ, ಚುನಾವಣಾ ಆಯೋಗವು ಹೆಸರು ಹೊಂದಿಕೆಯಾಗದಿರುವುದಕ್ಕೆ ಕಾರಣಗಳನ್ನೂ ಸಂಕ್ಷಿಪ್ತವಾಗಿ ನಮೂದಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಭಾರತೀಯ ಚುನಾವಣಾ ಆಯೋಗದ ಸೂಚನೆಗಳನ್ನು ಪಾಲಿಸುವಂತೆ ಹಾಗೂ ರಾಜ್ಯದಲ್ಲಿ ವಿಶೇಷ ತೀವ್ರ ಪರಿಷ್ಕರಣೆಯು ಸುಸೂತ್ರವಾಗಿ ನಡೆಯಲು ಸಾಧ್ಯವಾಗುವಂತೆ ಸಾಕಷ್ಟು ಸಂಖ್ಯೆಯಲ್ಲಿ ಸಿಬ್ಬಂದಿಯನ್ನು ನಿಯೋಜಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶನಗಳನ್ನೂ ನ್ಯಾಯಾಲಯ ನೀಡಿತು.





