ತಮಿಳುನಾಡು: ಮಸೂದೆಗಳ ಮರು ಅಂಗೀಕಾರಕ್ಕೆ ವಿಶೇಷ ಅಧಿವೇಶನ
ಅಂಕಿತ ಹಾಕದೇ ಮಸೂದೆಗಳನ್ನು ಮರಳಿಸಿದ್ದ ರಾಜ್ಯಪಾಲರು
Photo : PTI
ಚೆನ್ನೈ: ರಾಜ್ಯಪಾಲ ಆರ್.ಎನ್.ರವಿ ಅವರು ಮರಳಿಸಿರುವ ಮಸೂದೆಗಳ ಮರು ಅಂಗೀಕಾರಕ್ಕಾಗಿ ಶನಿವಾರ ತಮಿಳುನಾಡು ವಿಧಾನಸಭೆಯ ವಿಶೇಷ ಅಧಿವೇಶನ ನಡೆಯಲಿದೆ ಎಂದು ಸ್ಪೀಕರ್ ಎಂ.ಅಪ್ಪಾವು ಅವರು ಗುರುವಾರ ಪ್ರಕಟಿಸಿದರು.
ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಎಐಎಡಿಎಂಕೆ ಸಂಘಟನಾ ಕಾರ್ಯದರ್ಶಿ ಡಿ.ಜಯಕುಮಾರ ಅವರು, ವಿಶೇಷ ಅಧಿವೇಶನದಲ್ಲಿ ಭಾಗವಹಿಸಬೇಕೇ ಎಂಬ ಕುರಿತು ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ ಎಂದು ತಿಳಿಸಿದ್ದಾರೆ.
ಗಮನಾರ್ಹವಾಗಿ, ವಿಧಾನಸಭೆಯು ಅಂಗೀಕರಿಸಿರುವ ಮಸೂದೆಗಳ ಕುರಿತು ನಿರ್ಧಾರವನ್ನು ಕೈಗೊಳ್ಳಲು ರಾಜ್ಯಪಾಲರಿಗೆ ಗಡುವು ಕೋರಿ ತಮಿಳುನಾಡು ಸರಕಾರವು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ ಬಳಿಕ ರವಿ, ಸುದೀರ್ಘ ಕಾಲದಿಂದ ತನ್ನ ಒಪ್ಪಿಗೆಗೆ ಬಾಕಿಯಿದ್ದ ಮಸೂದೆಗಳನ್ನು ಮರಳಿಸಿದ್ದಾರೆ.
ತಿರುವಣ್ಣಾಮಲೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸ್ಪೀಕರ್, ರಾಜ್ಯಪಾಲರು ಮರಳಿಸಿರುವ ಮಸೂದೆಗಳನ್ನು ಯಾವುದೇ ಬದಲಾವಣೆಗಳಿಲ್ಲದೆ ಮರು ಅಂಗೀಕರಿಸಲಾಗುವುದು ಎಂದು ತಿಳಿಸಿದರು.
ಸರ್ವೋಚ್ಚ ನ್ಯಾಯಾಲಯವು ರಾಜ್ಯಪಾಲರ ಕುರಿತು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಮತ್ತು ಡಿಎಂಕೆ ಸರಕಾರಕ್ಕೆ ನೀಡಿರುವ ಸಲಹೆಯ ಮೇಲೆ ವಿಶೇಷ ಅಧಿವೇಶನದಲ್ಲಿ ಚರ್ಚೆ ನಡೆಯಲಿದೆಯೇ ಎಂಬ ಪ್ರಶ್ನೆಗೆ ಸ್ಪೀಕರ್, ವಿಧಾನಸಭಾ ಅಧಿವೇಶನದಲ್ಲಿ ರಾಜ್ಯಪಾಲರು,ರಾಷ್ಟ್ರಪತಿಗಳು ಅಥವಾ ನ್ಯಾಯಾಂಗದ ಕುರಿತು ಯಾವುದೇ ಚರ್ಚೆ ನಡೆಯುವುದಿಲ್ಲ. ಈಗ ರಾಜ್ಯಪಾಲರು ಮಸೂದೆಗಳನ್ನು ಮರಳಿಸಿದ್ದಾರೆ ಮತ್ತು ಅವುಗಳನ್ನು ಮರು ಅಂಗೀಕರಿಸಲು ಸರಕಾರವು ಬಯಸಿದೆ ಎಂದು ಉತ್ತರಿಸಿದರು.
ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಸ್ಪೀಕರ್, ರಾಜ್ಯ ವಿಧಾನಸಭೆಯು ಮಸೂದೆಯೊಂದನ್ನು ಎರಡನೇ ಬಾರಿ ಅಂಗೀಕರಿಸಿದಾಗ ಸಂವಿಧಾನದಂತೆ ರಾಜ್ಯಪಾಲರು ತನ್ನ ಒಪ್ಪಿಗೆಯನ್ನು ನೀಡಬೇಕಾಗುತ್ತದೆ ಎಂದು ತಿಳಿಸಿದರು.
ಆನ್ಲೈನ್ ರಮ್ಮಿ ನಿಷೇಧ,ನೀಟ್ ಪರೀಕ್ಷೆಯ ರದ್ದತಿಗೆ ಸಂಬಂಧಿಸಿದ ಮಸೂದೆಗಳನ್ನು ರಾಜ್ಯಪಾಲರು ಈಗಾಗಲೇ ಮರಳಿಸಿದ್ದರು. ಆದಾಗ್ಯೂ ಆನ್ಲೈನ್ ರಮ್ಮಿ ನಿಷೇಧ ಮಸೂದೆಯು ಮರು ಅಂಗೀಕಾರಗೊಂಡಾಗ ಅದಕ್ಕೆ ಒಪ್ಪಿಗೆ ನೀಡಿರುವ ರಾಜ್ಯಪಾಲರು, ಮರು ಅಂಗೀಕಾರಗೊಂಡ ನೀಟ್ ವಿರೋಧಿ ಮಸೂದೆಯನ್ನು ರಾಷ್ಟ್ರಪತಿಗಳಿಗೆ ಕಳುಹಿಸಿದ್ದಾರೆ.
ರಾಜ್ಯಪಾಲ ರವಿ ಎಷ್ಟು ಮಸೂದೆಗಳನ್ನು ಸರಕಾರಕ್ಕೆ ಮರಳಿಸಿದ್ದಾರೆ ಎನ್ನುವುದು ಸ್ಪಷ್ಟವಿಲ್ಲ. ನಾಲ್ಕು ಅಧಿಕೃತ ಆದೇಶಗಳು ಮತ್ತು 54 ಕೈದಿಗಳ ಅವಧಿಪೂರ್ವ ಬಿಡುಗಡೆಗೆ ಸಂಬಂಧಿಸಿದ ಕಡತದ ಜೊತೆಗೆ ಕನಿಷ್ಠ 12 ಮಸೂದೆಗಳು ರಾಷ್ಟ್ರಪತಿಗಳ ಬಳಿ ಬಾಕಿಯಿದ್ದವು.
ಕಳೆದ ಅಕ್ಟೋಬರ್ ನಲ್ಲಿ ರಾಜ್ಯ ವಿಧಾನಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು.
ನ.10ರಂದು ತಮಿಳುನಾಡು ರಾಜ್ಯಪಾಲರನ್ನು ತರಾಟೆಗೆತ್ತಿಕೊಂಡಿದ್ದ ಸರ್ವೋಚ್ಚ ನ್ಯಾಯಾಲಯವು, ವಿಧಾನಸಭೆಯು ಅಂಗೀಕರಿಸಿರುವ ಮಸೂದೆಗಳಿಗೆ ಒಪ್ಪಿಗೆಯನ್ನು ನೀಡಲು ಅವರು ವಿಳಂಬಿಸುತ್ತಿರುವುದು ಗಂಭೀರ ವಿಷಯವಾಗಿದೆ ಎಂದು ಬಣ್ಣಿಸಿತ್ತು.
ರಾಜ್ಯಪಾಲರು 12 ಮಸೂದೆಗಳನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಆರೋಪಿಸಿ ರಾಜ್ಯ ಸರಕಾರವು ಸಲ್ಲಿಸಿರುವ ಅರ್ಜಿಗೆ ಉತ್ತರಿಸುವಂತೆ ಸರ್ವೋಚ್ಚ ನ್ಯಾಯಾಲಯವು ಕೇಂದ್ರಕ್ಕೆ ಸೂಚಿಸಿತ್ತು.