ಶಿಕ್ಷಣ ನಿಧಿಯ ವಾರ್ಷಿಕ ಪಾಲನ್ನು ಇನ್ನೂ ನೀಡದ ಕೇಂದ್ರ ಸರ್ಕಾರ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ತಮಿಳುನಾಡು ಸರ್ಕಾರ

Photo credit: PTI
ಹೊಸದಿಲ್ಲಿ: ಕೇಂದ್ರ ಸರ್ಕಾರದಿಂದ ತನ್ನ ರಾಜ್ಯಕ್ಕಾಗುತ್ತಿರುವ ಅನ್ಯಾಯದ ಬಗ್ಗೆ ಸದಾ ದನಿಯೆತ್ತುತ್ತಾ ಬಂದಿರುವ ತಮಿಳುನಾಡು ಸರ್ಕಾರವು ಇದೀಗ, ಶಿಕ್ಷಣ ನಿಧಿಯ ವಾರ್ಷಿಕ ಪಾಲನ್ನು ನೀಡದಿರುವ ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಕೇಂದ್ರವು, ಸಮಗ್ರ ಶಿಕ್ಷಾ ಯೋಜನೆಯ ರೂ. 2000 ಕೋಟಿಗೂ ಹೆಚ್ಚಿನ ಶಿಕ್ಷಣ ನಿಧಿಯ ವಾರ್ಷಿಕ ಪಾಲನ್ನು ನಿಲ್ಲಿಸಿದೆ ಎಂದು ಆರೋಪಿಸಿ ತಮಿಳುನಾಡು ರಾಜ್ಯವು ಸುಪ್ರೀಂ ಕೋರ್ಟ್ನಲ್ಲಿ ಮೊಕದ್ದಮೆ ಹೂಡಿದೆ.
ವಕೀಲರಾದ ರಿಚರ್ಡ್ಸನ್ ವಿಲ್ಸನ್ ಮತ್ತು ಅಪೂರ್ವ್ ಮಲ್ಹೋತ್ರಾ ಮೊಕದ್ದಮೆಯನ್ನುದಾಖಲಿಸಿದ್ದು, ಹಿರಿಯ ವಕೀಲ ಪಿ. ವಿಲ್ಸನ್ ಅವರು ತಮಿಳುನಾಡು ಸರ್ಕಾರವನ್ನು ಪ್ರತಿನಿಧಿಸುತ್ತಿದ್ದಾರೆ.
ಸಮಗ್ರ ಶಿಕ್ಷಾ ಯೋಜನೆಯ ಹಣವನ್ನು ವಿತರಿಸದಿರಲು ʼಸ್ಪಷ್ಟ ಹಾಗೂ ಕರಾರುವಕ್ಕು ಕಾರಣʼವನ್ನು ತಮಿಳುನಾಡು ಕೇಳಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಮತ್ತು ತ್ರಿಭಾಷಾ ಸೂತ್ರಕ್ಕೆ ರಾಜ್ಯದ ತೀವ್ರ ವಿರೋಧ ಇದೆ ಎಂದು ಹೇಳಿದೆ.
PM SHRI ಶಾಲೆಗಳ ಯೋಜನೆಯು ರಾಜ್ಯದಲ್ಲಿ NEP-2020 ಅನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವುದನ್ನು ಕಡ್ಡಾಯಗೊಳಿಸುತ್ತಿದ್ದು, ಇದಕ್ಕೂ ತಮಿಳುನಾಡು ಸರ್ಕಾರ ಆಕ್ಷೇಪ ಸಲ್ಲಿಸಿದೆ.
ತಮಿಳುನಾಡು ರಾಜ್ಯ ವಕೀಲ ಸಬರೀಶ್ ಸುಬ್ರಮಣಿಯನ್ ಮೂಲಕ ಸಲ್ಲಿಸಲಾದ ಮೊಕದ್ದಮೆಯು, ಸಮಗ್ರ ಶಿಕ್ಷಾ ಯೋಜನೆಯು NEP-2020 ಮತ್ತು PM ಶ್ರೀ ಶಾಲೆಗಳ ಯೋಜನೆಗೆ ಯಾವುದೇ ರೀತಿಯಲ್ಲಿ ಸಂಬಂಧಿಸಿಲ್ಲ ಎಂದು ಹೇಳಿದೆ.
"ಸಮಗ್ರ ಶಿಕ್ಷಾ ಯೋಜನೆಯಡಿಯಲ್ಲಿ ರಾಜ್ಯಕ್ಕೆ ಹಣವನ್ನು ಪಡೆಯುವ ಹಕ್ಕನ್ನು ತಡೆಹಿಡಿಯುವ ಮೂಲಕ ಕೇಂದ್ರ ಸರ್ಕಾರವು ಸಹಕಾರಿ ಒಕ್ಕೂಟ ವ್ಯವಸ್ಥೆಯ ಸಿದ್ಧಾಂತದ ಅಜ್ಞಾನವನ್ನು ಪ್ರದರ್ಶಿಸುತ್ತಿದೆ. ಶಿಕ್ಷಣ ನಿಧಿಯನ್ನು ಸ್ಥಗಿತಗೊಳಿಸುವುದು ಶಾಸನ ಮಾಡುವ ರಾಜ್ಯದ ಸಾಂವಿಧಾನಿಕ ಅಧಿಕಾರವನ್ನು ಕಸಿದುಕೊಂಡಂತೆ. NEP-2020 ಅನ್ನು ಸಂಪೂರ್ಣವಾಗಿ ರಾಜ್ಯದಾದ್ಯಂತ ಜಾರಿಗೆ ತರಲು ಮತ್ತು ರಾಜ್ಯದಲ್ಲಿ ಅನುಸರಿಸುತ್ತಿರುವ ಶಿಕ್ಷಣ ಆಡಳಿತದಿಂದ ವಿಮುಖವಾಗಲು ಕೇಂದ್ರ ಸರ್ಕಾರವು ರಾಜ್ಯವನ್ನು ಒತ್ತಾಯಿಸಲು ಪ್ರಯತ್ನಿಸುತ್ತದೆ" ಎಂದು ಮೊಕದ್ದಮೆಯಲ್ಲಿ ವಾದಿಸಲಾಗಿದೆ.
ಯೋಜನಾ ಅನುಮೋದನೆ ಮಂಡಳಿಯಿಂದ ಅನುಮೋದಿಸಲ್ಪಟ್ಟಂತೆ, 2025-2026 ರ ಸಾಲಿಗೆ ಸಮಗ್ರ ಶಿಕ್ಷಾ ಯೋಜನೆಯಡಿ ತಮಿಳುನಾಡಿಗೆ ನೀಡಬೇಕಾದ 60% ಕೊಡುಗೆ ಪಾಲಿನ ರೂ. 2151,59,61,000 ಹಣವನ್ನು ವಿತರಿಸದಿರುವುದು ಸಮಗ್ರ ಶಿಕ್ಷಾ ಯೋಜನೆ ಮತ್ತು RTE ಕಾಯ್ದೆ, 2009 ರ ಅನುಷ್ಠಾನದ ಮೇಲೆ ತೀವ್ರ ಪರಿಣಾಮ ಬೀರಿದೆ. ರಾಜ್ಯದಲ್ಲಿ 43,94,906 ವಿದ್ಯಾರ್ಥಿಗಳು, 2,21,817 ಶಿಕ್ಷಕರು ಮತ್ತು 32,701 ಸಿಬ್ಬಂದಿಗಳ ಮೇಲೆ ಹಣದ ಕೊರತೆ ಪರಿಣಾಮ ಬೀರಿದೆ ಎಂದು ತಮಿಳುನಾಡು ಆರೋಪಿಸಿದೆ.







