Tamilnadu| ವಿಶ್ವವಿದ್ಯಾಲಯ ತಿದ್ದುಪಡಿ ಮಸೂದೆ ವಾಪಸ್: ಸ್ಟಾಲಿನ್ ಸರಕಾರಕ್ಕೆ ಹಿನ್ನಡೆ

ಎಂ.ಕೆ. ಸ್ಟಾಲಿನ್ | Photo Credit : PTI
ಚೆನ್ನೈ: ರಾಜ್ಯ ಸರಕಾರಕ್ಕೆ ಕುಲಪತಿ ನೇಮಕಾಧಿಕಾರ ನೀಡುವ ಉದ್ದೇಶದ ತಮಿಳುನಾಡು ವಿಶ್ವವಿದ್ಯಾಲಯ ತಿದ್ದುಪಡಿ ಮಸೂದೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ವಾಪಸ್ ಕಳುಹಿಸಿದ್ದಾರೆ. ಈ ಬೆಳವಣಿಗೆಯಿಂದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಸರಕಾರಕ್ಕೆ ರಾಜಕೀಯ ಹಿನ್ನಡೆ ಎದುರಾಗಿದೆ.
ಏಪ್ರಿಲ್ 2022ರಲ್ಲಿ ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕಾರ ಪಡೆದಿದ್ದ ಈ ಮಸೂದೆಯನ್ನು ರಾಷ್ಟ್ರಪತಿಯ ಅನುಮೋದನೆಗಾಗಿ ಕಳುಹಿಸಲಾಗಿತ್ತು. 168 ವರ್ಷಗಳ ಇತಿಹಾಸ ಹೊಂದಿರುವ ಮದ್ರಾಸ್ ವಿಶ್ವವಿದ್ಯಾಲಯ ಕಳೆದ ಎರಡು ವರ್ಷಗಳಿಗೂ ಅಧಿಕ ಕಾಲ ನಿಯಮಿತ ಕುಲಪತಿಯಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ, ಆಡಳಿತಾತ್ಮಕ ನಿಯಂತ್ರಣವನ್ನು ರಾಜ್ಯ ಸರಕಾರದ ವಶಕ್ಕೆ ತರುವ ಉದ್ದೇಶದಿಂದ ಈ ತಿದ್ದುಪಡಿ ತರಲಾಗಿತ್ತು.
ಪ್ರಸ್ತಾವಿತ ತಿದ್ದುಪಡಿಯಂತೆ, ಪ್ರಸ್ತುತ ಎಕ್ಸ್–ಆಫಿಸಿಯೊ ಕುಲಪತಿಯಾಗಿ ಕಾರ್ಯನಿರ್ವಹಿಸುತ್ತಿರುವ ರಾಜ್ಯಪಾಲರಿಂದ ಕುಲಪತಿಯನ್ನು ನೇಮಿಸುವ ಮತ್ತು ತೆಗೆದುಹಾಕುವ ಅಧಿಕಾರವನ್ನು ರಾಜ್ಯ ಸರಕಾರಕ್ಕೆ ವರ್ಗಾಯಿಸುವಂತೆ ಮದ್ರಾಸ್ ವಿಶ್ವವಿದ್ಯಾಲಯ ಕಾಯ್ದೆಯನ್ನು ಬದಲಾಯಿಸಲು ಉದ್ದೇಶಿಸಲಾಗಿತ್ತು. ಆದರೆ ರಾಜ್ಯಪಾಲ ಆರ್.ಎನ್. ರವಿ ಅವರು, ಈ ಕ್ರಮವು ವಿಶ್ವವಿದ್ಯಾಲಯ ಅನುದಾನ ಆಯೋಗದ ನಿಯಮಾವಳಿ ಹಾಗೂ ಕುಲಪತಿ ನೇಮಕಾತಿಗೆ ಸಂಬಂಧಿಸಿದ ಸ್ಥಾಪಿತ ಮಾನದಂಡಗಳಿಗೆ ವಿರುದ್ಧವಾಗುವ ಸಾಧ್ಯತೆ ಇದೆ ಎಂಬ ಆಕ್ಷೇಪ ವ್ಯಕ್ತಪಡಿಸಿ ಮಸೂದೆಯನ್ನು ರಾಷ್ಟ್ರಪತಿಯ ಪರಿಗಣನೆಗೆ ಕಾಯ್ದಿರಿಸಿದ್ದರು.
ಮಸೂದೆ ವಾಪಸ್ ಬಂದಿರುವ ಹಿನ್ನೆಲೆಯಲ್ಲಿ, ವಿಧಾನಸಭೆ ಪ್ರಸ್ತಾವಿತ ಶಾಸನವನ್ನು ಮರುಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ರಾಜ್ಯದ 22 ವಿಶ್ವವಿದ್ಯಾಲಯಗಳಲ್ಲಿ ಮದ್ರಾಸ್ ವಿಶ್ವವಿದ್ಯಾಲಯ ಸೇರಿದಂತೆ ಸುಮಾರು 14 ಸಂಸ್ಥೆಗಳು ನಿಯಮಿತ ಕುಲಪತಿಗಳಿಲ್ಲದೆ ಸಂಚಾಲಕ ಸಮಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.







