ಕರೂರು ಕಾಲ್ತುಳಿತ | ಸಾರ್ವಜನಿಕ ಕಾರ್ಯಕ್ರಮಗಳಿಗೆ ನಿಯಮಗಳನ್ನು ರೂಪಿಸಲಿರುವ ತಮಿಳುನಾಡು ಸರಕಾರ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ | Photo Credit : PTI
ಚೆನ್ನೈ,ಸೆ.29: ರಾಜಕೀಯ ಪಕ್ಷಗಳು ಮತ್ತು ಇತರ ಸಂಸ್ಥೆಗಳು ನಡೆಸುವ ಸಾರ್ವಜನಿಕ ಕಾರ್ಯಕ್ರಮಗಳಿಗಾಗಿ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ರೂಪಿಸಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಸೋಮವಾರ ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
‘ನ್ಯಾ.ಅರುಣಾ ಜಗದೀಶನ್ ವಿಚಾರಣಾ ಆಯೋಗವು ತನ್ನ ವರದಿಯನ್ನು ಸಲ್ಲಿಸಿದ ಬಳಿಕ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ರೂಪಿಸಲು ಎಲ್ಲ ರಾಜಕೀಯ ಪಕ್ಷಗಳು ಹಾಗೂ ಇತರ ಸಂಸ್ಥೆಗಳೊಂದಿಗೆ ಸಮಾಲೋಚನೆಗಳನ್ನು ನಡೆಸಲಾಗುವುದು. ಇಂತಹ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ರೂಪಿಸುವುದು ನಮ್ಮ ಸಾಮೂಹಿಕ ಕರ್ತವ್ಯವಾಗಿದೆ ’ ಎಂದು ಅವರು ತಿಳಿಸಿದ್ದಾರೆ.
ಕರೂರು ದುರಂತಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಪರಿಶೀಲಿಸಲ್ಪಡದ ಹೇಳಿಕೆಗಳು ಮತ್ತು ಊಹಾಪೋಹಗಳನ್ನು ಉಲ್ಲೇಖಿಸಿರುವ ಸ್ಟಾಲಿನ್, ಸಂಯಮವನ್ನು ಪ್ರದರ್ಶಿಸುವಂತೆ ಮತ್ತು ಬೇಜವಾಬ್ದಾರಿಯ ಅಥವಾ ದುರುದ್ದೇಶಪೂರಿತ ಹೇಳಿಕೆಗಳನ್ನು ನೀಡದಂತೆ ಜನರಿಗೆ ಕಿವಿಮಾತು ಹೇಳಿದ್ದಾರೆ.





