ಶೌಚಗೃಹದಲ್ಲಿ ಗೌಪ್ಯ ಕ್ಯಾಮೆರಾ ಪತ್ತೆ ವಿವಾದ: ಮಹಿಳಾ ಉದ್ಯೋಗಿಗಳ ಸುರಕ್ಷತೆಯ ಭರವಸೆ ನೀಡಿದ ಟಾಟಾ ಇಲೆಕ್ಟ್ರಾನಿಕ್ಸ್

ಸಾಂದರ್ಭಿಕ ಚಿತ್ರ (AI-Grok)
ಚೆನ್ನೈ: ಹೊಸೂರು ಸಮೀಪದ ಟಾಟಾ ಇಲೆಕ್ಟ್ರಾನಿಕ್ಸ್ ಕಂಪೆನಿಯ ವಸತಿ ನಿಲಯದ ಶೌಚಗೃಹದಲ್ಲಿ ಗೌಪ್ಯ ಕ್ಯಾಮೆರಾ ಪತ್ತೆಯಾದ ಘಟನೆ ಬಯಲಿಗೆ ಬಂದು ವಿವಾದಕ್ಕೆ ಕಾರಣವಾದ ಬಳಿಕ, ಸಂಸ್ಥೆಯು ಮಹಿಳಾ ಉದ್ಯೋಗಿಗಳಿಗೆ ಸುರಕ್ಷತೆ ಮತ್ತು ಖಾಸಗಿತನದ ಭರವಸೆ ನೀಡಿದೆ.
“ಟಾಟಾ ಇಲೆಕ್ಟ್ರಾನಿಕ್ಸ್ನಲ್ಲಿ ಉದ್ಯೋಗಿಗಳ ಸುರಕ್ಷತೆ, ಖಾಸಗಿತನ ನಮ್ಮ ಅತ್ಯುನ್ನತ ಆದ್ಯತೆಗಳಲ್ಲೊಂದು. ಹೊಸೂರಿನಲ್ಲಿರುವ ವಸತಿ ನಿಲಯದಲ್ಲಿ ನಡೆದ ಘಟನೆಯ ಬಗ್ಗೆ ನಮಗೆ ಮಾಹಿತಿ ದೊರೆತ ತಕ್ಷಣವೇ ಕ್ರಮ ಕೈಗೊಂಡಿದ್ದೇವೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಮತ್ತು ತನಿಖೆ ಪ್ರಗತಿಯಲ್ಲಿದೆ,” ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
“ಈ ಘಟನೆಗೆ ನಾವು ಕಾಳಜಿಯಿಂದ ಸ್ಪಂದಿಸಿದ್ದೇವೆ. ಎಲ್ಲ ಉದ್ಯೋಗಿಗಳು ಸುರಕ್ಷಿತ ಹಾಗೂ ಬೆಂಬಲದಾಯಕ ವಾತಾವರಣದಲ್ಲಿ ಕೆಲಸ ಮಾಡಲು ಅಗತ್ಯ ನೀತಿಗಳು ಈಗಾಗಲೇ ಜಾರಿಯಲ್ಲಿವೆ,” ಎಂದು ಅವರು ಹೇಳಿದರು.
ಗೌಪ್ಯ ಕ್ಯಾಮೆರಾ ಪತ್ತೆಯಾದ ಘಟನೆ ಬಳಿಕ ಮಂಗಳವಾರ ರಾತ್ರಿ ವಸತಿ ನಿಲಯದ ಮಹಿಳಾ ಉದ್ಯೋಗಿಗಳು ವ್ಯಾಪಕವಾಗಿ ಪ್ರತಿಭಟನೆ ನಡೆಸಿದ್ದರು. ತಮ್ಮ ಖಾಸಗಿತನಕ್ಕೆ ಧಕ್ಕೆ ಉಂಟಾದ ಹಿನ್ನೆಲೆಯಲ್ಲಿ ಅವರು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆ ಸಂಸ್ಥೆ ಮಹಿಳಾ ಉದ್ಯೋಗಿಗಳಿಗೆ ಎಲ್ಲಾ ರೀತಿಯ ಭದ್ರತೆ ಒದಗಿಸಲು ಬದ್ಧವಾಗಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.







