ಟಾಟಾ ಎಲೆಕ್ಟ್ರಾನಿಕ್ಸ್ ನಿಂದ ಇಂಟೆಲ್ಗೆ ಲ್ಯಾಪ್ಟಾಪ್, ಚಿಪ್ ಉತ್ಪಾದನೆ

PC | timesofindia
ಮುಂಬೈ: ಗುಜರಾತ್ ಮತ್ತು ಅಸ್ಸಾಂನಲ್ಲಿ ನಿರ್ಮಾಣ ಹಂತದಲ್ಲಿರುವ ತನ್ನ ಘಟಕಗಳಲ್ಲಿ ಇಂಟೆಲ್ ಸಂಸ್ಥೆಗಾಗಿ ಚಿಪ್ ಮತ್ತು ಲ್ಯಾಪ್ಟಾಪ್ ಗಳನ್ನು ಉತ್ಪಾದಿಸಲು ಟಾಟಾ ಎಲೆಕ್ಟ್ರಾನಿಕ್ಸ್ ನಿರ್ಧರಿಸಿದೆ. ಸೆಮಿಕಂಡಕ್ಟರ್ ಉತ್ಪಾದನೆಯ ಶಕ್ತಿಕೇಂದ್ರಗಳೆನಿಸಿದ ತೈವಾನ್ನಂಥ ದೇಶಗಳ ಜತೆ ಪೈಪೋಟಿ ನಡೆಸುವ ನಿಟ್ಟಿನಲ್ಲಿ ಹಾಗೂ ಜಾಗತಿಕ ಚಿಪ್ ಉತ್ಪಾದನೆಯ ಕೇಂದ್ರವಾಗಿ ತನ್ನ ಸ್ಥಾನವನ್ನು ಭಾರತ ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ.
ಈ ಸಂಬಂಧ ಟಾಟಾ ಇಲೆಕ್ಟ್ರಾನಿಕ್ಸ್ ಹಾಗೂ ಇಂಟೆಲ್ ನಡುವೆ ಮಾಡಿಕೊಂಡ ಒಪ್ಪಂದದ ಅನ್ವಯ, ಸೆಮಿಕಂಡಕ್ಟರ್ ಸೌಲಭ್ಯಗಳಿಗಾಗಿ ಟಾಟಾ 14 ಶತಕೋಟಿ ಡಾಲರ್ ಹೂಡಿಕೆ ಮಾಡಲಿದೆ. ಈ ಹೊಸ ಘಟಕಗಳಲ್ಲಿ ಇಂಟೆಲ್ ಉತ್ಪನ್ನಗಳ ಉತ್ಪಾದನೆ ಮತ್ತು ಪ್ಯಾಕೇಜ್ ನಡೆಯಲಿದೆ ಎಂದು ಜಂಟಿ ಪ್ರಕಟಣೆಯಲ್ಲಿ ಹೇಳಲಾಗಿದೆ.
ಅಸ್ಸಾಂನಲ್ಲಿ ಚಿಪ್ ಪರೀಕ್ಷಾ ಸೌಲಭ್ಯ ಮುಂದಿನ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಕಾರ್ಯಾಚರಣೆ ಆರಂಭಿಸಲಿದೆ. ಗುಜರಾತ್ ಘಟಕವು 2027ರಲ್ಲಿ ಚಿಪ್ ಉತ್ಪಾದನೆ ಆರಂಭಿಸಲಿದೆ. ಇಂಟೆಲ್ನ ಎಐ-ಚಾಲಿತ ಲ್ಯಾಪ್ಟಾಪ್ ಚಿಪ್ಗಳ ಉತ್ಪಾದನ, ಅತ್ಯಾಧುನಿಕ ಚಿಪ್-ಪ್ಯಾಕಿಂಗ್ ತಂತ್ರಜ್ಞಾನದಂಥ ಅಂಶಗಳು ಒಪ್ಪಂದದಲ್ಲಿ ಸೇರಿವೆ. ಆದರೆ ಎಷ್ಟು ಮೌಲ್ಯದ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂಬ ಬಗ್ಗೆ ಬಹಿರಂಗಪಡಿಸಿಲ್ಲ.
ಈ ಸಹಭಾಗಿತ್ವವು ಮಿತವೆಚ್ಚವನ್ನು ವಿಸ್ತರತಗೊಳಿಸಲಿದೆ. ಜತೆಗೆ ಮಾರುಕಟ್ಟೆ ತಲುಪುವ ವೇಗಕ್ಕೆ ಕಾರಣವಾಗಲಿದ್ದು, ಕಾರ್ಯಾಚರಣೆ ಸುಧಾರಣೆಗೆ ನೆರವಾಗಲಿದೆ. ಭಾರತದಲ್ಲಿ ಮುಂದಿನ ಪೀಳಿಗೆಯ ಎಐ ಅನುಸರಣೆಯ ಬೇಡಿಕೆಯನ್ನು ಈಡೇರಿಸಲು ಇಂಟೆಲ್ಗೆ ನೆರವಾಗಲಿದೆ ಎಂದು ಟಾಟಾ ಎಲೆಕ್ಟ್ರಾನಿಕ್ಸ್ ಎಂಡಿ ರಣಧೀರ್ ಠಾಕೂರ್ ಹೇಳಿದ್ದಾರೆ. ಇವರು 2023ರ ಏಪ್ರಿಲ್ನಲ್ಲಿ ಟಾಟಾ ಸಮೂಹಕ್ಕೆ ಸೇರುವ ಮುನ್ನ ಇಂಟೆಲ್ನ ಫೌಂಡ್ರಿ ಸರ್ವೀಸಸ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು.







