ನಿಂತಿದ್ದ ರೈಲಿನ ಮೇಲೆ ರೀಲ್ ಮಾಡುವಾಗ ವಿದ್ಯುತ್ ಆಘಾತ: ಬಾಲಕ ಮೃತ್ಯು

ಸಾಂದರ್ಭಿಕ ಚಿತ್ರ (Grok)
ಥಾಣೆ: ನಿಂತಿದ್ದ ರೈಲಿನ ಮೇಲೆ ʼರೀಲ್ʼ ಮಾಡುವ ಪ್ರಯತ್ನದಲ್ಲಿ 16 ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ನವಿ ಮುಂಬೈನ ನೆರೂಲ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.
ನವಿ ಮುಂಬೈನ ಬೇಲಾಪುರ್ ಗ್ರಾಮದ ಆರವ್ ಶ್ರೀವಾಸ್ತವ ಮೃತಪಟ್ಟ ಬಾಲಕ.
ಜುಲೈ 6ರಂದು ತನ್ನ ಸ್ನೇಹಿತರೊಂದಿಗೆ ಆರವ್ ರೈಲ್ವೆ ನಿಲ್ದಾಣಕ್ಕೆ ತೆರಳಿದ್ದ ಎಂದು ವಾಶಿ ಸರಕಾರಿ ರೈಲ್ವೆ ಪೊಲೀಸ್ ಇಲಾಖೆಯ ಹಿರಿಯ ಇನ್ಸ್ ಪೆಕ್ಟರ್ ಕಿರಣ್ ಉಂದ್ರೆ ಮಾಹಿತಿ ನೀಡಿದ್ದಾರೆ.
“ನಿಲುಗಡೆಯಾಗಿದ್ದ ತ್ಯಾಜ್ಯದಿಂದ ತುಂಬಿದ್ದ ರೈಲಿನ ಮೇಲೇರಿದ್ದ ಆತ, ರೀಲ್ ಮಾಡುವ ಸಿದ್ಧತೆಯಲ್ಲಿ ತೊಡಗಿದ್ದ. ಈ ವೇಳೆ, ಬೋಗಿ ಮೇಲಿನ ಹೈ ವೋಲ್ಟೇಜ್ ವಿದ್ಯುತ್ ತಂತಿಗೆ ಆತನ ಕೈ ತಾಗಿದ್ದು, ಆತ ತೀವ್ರ ವಿದ್ಯುದಾಘಾತಕ್ಕೆ ತುತ್ತಾಗಿದ್ದಾನೆ. ಆ ಕೂಡಲೇ ಆತ ಬೋಗಿಯಿಂದ ಕೆಳಗೆ ಬಿದ್ದಿದ್ದಾನೆ” ಎಂದು ಅವರು ತಿಳಿಸಿದ್ದಾರೆ.
ಈ ವಿದ್ಯುದಾಘಾತದಿಂದ ಬಾಲಕನ ತಲೆ ಹಾಗೂ ದೇಹದ ಇನ್ನಿತರ ಭಾಗಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಇದರೊಂದಿಗೆ ಶೇ. 60ರಷ್ಟು ಸುಟ್ಟ ಗಾಯಗಳೂ ಆಗಿದ್ದವು ಎಂದು ಅವರು ಹೇಳಿದ್ದಾರೆ.
ಆತನನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಯೊಂದಕ್ಕೆ ಸಾಗಿಸಲಾಯಿತಾದರೂ, ಆತನ ಪರಿಸ್ಥಿತಿ ಗಂಭೀರವಾಗಿದ್ದುದರಿಂದ, ನಂತರ, ಐರೋಲಿಯಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರು ದಿನಗಳ ಕಾಲ ಸಾವು-ಬದುಕಿನ ನಡುವಿನ ಹೋರಾಟ ನಡೆಸಿದ ಬಾಲಕ, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ ಮೃತಪಟ್ಟಿದ್ದಾನೆ ಎಂದು ಕಿರಣ್ ಉಂದ್ರೆ ತಿಳಿಸಿದ್ದಾರೆ.
ಈ ಸಂಬಂಧ ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಘಟನೆಯ ಕುರಿತು ತನಿಖೆ ಕೈಗೊಂಡಿದ್ದಾರೆ.







