ಸಹಪಾಠಿಗೆ ಗುಂಡಿಕ್ಕಿದ ಹದಿಹರೆಯದ ಬಾಲಕರು!

ಸಾಂದರ್ಭಿಕ ಚಿತ್ರ
ಗುರುಗ್ರಾಮ,ನ.9: ಹನ್ನೊಂದನೆ ತರಗತಿಯ ಇಬ್ಬರು ವಿದ್ಯಾರ್ಥಿಗಳು ಅವರ ಸಹಪಾಠಿಯೊಬ್ಬನಿಗೆ ಗುಂಡಿಕ್ಕಿದ ಘಟನೆ ಇಲ್ಲಿನ ವಿಲಾಸಿ ವಸತಿ ಬಡಾವಣೆಯೊಂದರಲ್ಲಿ ನಡೆದಿದೆ. ಈ ದುಷ್ಕೃತ್ಯಕ್ಕೆ ಬಳಸಿದ ಪಿಸ್ತೂಲ್, ಆರೋಪಿಗಳ ಪೈಕಿ ಓರ್ವನ ತಂದೆಗೆ ಸೇರಿದ್ದಾಗಿದ್ದು, ಪರವಾನಿಗೆ ಹೊಂದಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಗುರುಗ್ರಾಮದ ಸೆಕ್ಟರ್ 48ರಲ್ಲಿರುವ ಸೆಂಟ್ರಲ್ ಪಾರ್ಕ್ ರಿಸಾರ್ಟ್ ನಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಆರೋಪಿ ಬಾಲಕರಲ್ಲೊಬ್ಬಾತ 17 ವರ್ಷ ವಯಸ್ಸಿನ ಸಹಪಾಠಿಗೆ ಕರೆ ಮಾಡಿ, ತನ್ನ ತಂದೆ ಬಾಡಿಗೆಗೆಂದು ನೀಡಿದ್ದ ಅಪಾರ್ಟ್ಮೆಂಟ್ ಗೆ ಬರುವಂತೆ ಸೂಚಿಸಿದ್ದನು.
ಗುಂಡೇಟಿಗೊಳಗಾದ ಬಾಲಕನ ಪರಿಸ್ಥಿತಿ ಗಂಭೀರವಾಗಿದ್ದು, ಆತ ಗುರುಗ್ರಾಮದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಬ್ಬರೂ ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮ್ಮ ನಡುವೆ ಈ ಹಿಂದೆ ನಡೆದಿದ್ದ ಜಗಳಕ್ಕೆ ಸಂಬಂಧಿಸಿ ಆರೋಪಿಗಳು ಈ ಬಾಲಕನ ಮೇಲೆ ದಾಳಿ ಮಾಡಿದ್ದಾರೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಮೂವರು ಹದಿಹರೆಯದ ಹುಡುಗರು ಹೌಸಿಂಗ್ ಸೊಸೈಟಿಯ ಸಮೀಪದಲ್ಲಿರುವ ಶಾಲೆಯೊಂದರಲ್ಲಿಕಲಿಯುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಂದ ಒಂದು ಪಿಸ್ತೂಲ್, ಐದು ಸಜೀವ ಕಾಡತೂಸುಗಳು, ಒಂದು ಖಾಲಿ ಶೆಲ್, 65 ಸಜೀವ ಕಾಡತೂಸುಗಳಿರುವ ಇನ್ನೊಂದು ಮ್ಯಾಗಝೈನ್ ಅನ್ನು ವಶಪಡಿಸಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.







