"ಕೊನೆಗೂ 2024ರಲ್ಲಿ ಕೊಲೆ ಮಾಡಿದೆ": ವೈದ್ಯನ ಹತ್ಯೆಗೈದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಬಾಲಕ!

Photo credit: NDTV
ಹೊಸದಿಲ್ಲಿ: ಬುಧವಾರ ರಾತ್ರಿ ಆಗ್ನೇಯ ದಿಲ್ಲಿಯ ಕಲಿಂದಿ ಕುಂಜ್ ಪ್ರದೇಶದಲ್ಲಿನ ಮೂರು ಹಾಸಿಗೆಗಳನ್ನುಳ್ಳ ಆಸ್ಪತ್ರೆಯಲ್ಲಿ ವೈದ್ಯರೊಬ್ಬರಿಗೆ ಗುಂಡು ಹೊಡೆದು ಹತ್ಯೆಗೈದಿದ್ದ ಅಪ್ರಾಪ್ತನನ್ನು ಗುರುವಾರ ಬಂಧಿಸಿರುವ ಪೊಲೀಸರು, ಆತನಿಂದ ಕೃತ್ಯಕ್ಕೆ ಬಳಸಲಾಗಿದ್ದ ಆಯುಧವನ್ನು ವಶಪಡಿಸಿಕೊಂಡಿದ್ದಾರೆ.
ಬುಧವಾರ ರಾತ್ರಿ ಚಿಕಿತ್ಸೆಗೆಂದು ಆಗ್ನೇಯ ದಿಲ್ಲಿಯ ಕಲಿಂದಿ ಕುಂಜ್ ಪ್ರದೇಶದಲ್ಲಿರುವ ನೀಮಾ ಆಸ್ಪತ್ರೆಗೆ ತೆರಳಿದ್ದ 17 ವರ್ಷದ ಅಪ್ರಾಪ್ತ ಬಾಲಕನೋರ್ವ, 55 ವರ್ಷದ ವೈದ್ಯರೊಬ್ಬರಿಗೆ ಗುಂಡಿಟ್ಟು ಹತ್ಯೆಗೈದಿದ್ದ. ಇದಾದ ನಂತರ, “2024ರಲ್ಲಿ ಕೊನೆಗೂ ಕೊಲೆ ಮಾಡಿದೆ” ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ.
ಹತ್ಯೆಗೈದ ಬಾಲಕನೊಂದಿಗೆ ತೆರಳಿದ್ದ ಆತನ ಸ್ನೇಹಿತನೀಗ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ವೈದ್ಯ ಡಾ. ಜಾವೇದ್ ಅಖ್ತರ್ ಹತ್ಯೆ ಸಂಬಂಧ ಅವರ ನರ್ಸಿಂಗ್ ಹೋಮ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ ಶುಶ್ರೂಷಕಿ ಹಾಗೂ ಆಕೆಯ ಪತಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.





