‘ನನ್ನ ಹೆತ್ತವರಿಗೆ ಮಾನಸಿಕ ಕಿರುಕುಳ’ | ತನಿಖೆಗೆ ಕೇಂದ್ರ ಸರಕಾರವನ್ನು ಕೋರಿದ ತೇಜ್ಪ್ರತಾಪ್ ಯಾದವ್

ತೇಜ್ಪ್ರತಾಪ್ ಯಾದವ್ | Photo Credit : PTI
ಹೊಸದಿಲ್ಲಿ, ನ.18: ಲಾಲುಪ್ರಸಾದ್ ಕುಟುಂಬದಲ್ಲಿನ ಅಂತಃಕಲಹ ಉಲ್ಬಣಗೊಂಡಿದ್ದು, ತನ್ನ ಹೆತ್ತವರು ಯಾವುದೇ ರೀತಿಯ ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸುವಂತೆ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ಕೇಂದ್ರ ಸರಕಾರದ ಮೊರೆ ಹೋಗಿದ್ದಾರೆ.
ಅಲ್ಲದೆ ಆರ್ಜೆಡಿ ನಾಯಕ ಹಾಗೂ ತನ್ನ ಕಿರಿಯ ಸಹೋದರ ತೇಜಸ್ವಿ ಯಾದವ್ ರಿಂದ ಅಪಮಾನಿತಳಾಗಿದ್ದೇನೆಂದು ಸಾರ್ವಜನಿಕವಾಗಿ ಆರೋಪಿಸಿರುವ ಸಹೋದರಿ ರೋಹಿಣಿ ಆಚಾರ್ಯ ಅವರಿಗೂ ತೇಜ್ ಪ್ರತಾಪ್ ತನ್ನ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು ಲಾಲು ಪ್ರಸಾದ್ ಕುಟುಂಬದಲ್ಲಿ ತಲೆದೋರಿರುವ ಬಿಕ್ಕಟ್ಟಿಗೆ ‘ಜೈಚಂದ್’ಗಳೇ ಕಾರಣ ಎಂದು ದೂರಿದ್ದಾರೆ. ವಿಶ್ವಾಸದ್ರೋಹಿಗಳಿಗೆ ಅನ್ವರ್ಥನಾಮಪದವಾಗಿ ರಜಪೂತ ದೊರೆ ‘ಜೈಚಂದ್’ನ ಹೆಸರನ್ನು ಬಳಸಲಾಗುತ್ತದೆ.
ತನ್ನ ಹೆತ್ತವರಾದ ಲಾಲುಪ್ರಸಾದ್ ದಂಪತಿಯು, ಯಾವುದೇ ವಿಧದ ಮಾನಸಿಕ ಕಿರುಕುಳಕ್ಕೊಳಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸುವಂತೆ ತೇಜ್ ಪ್ರತಾಪ್ ಅವರು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಹಾರ ಸರಕಾರವನ್ನು ಕೋರಿದ್ದಾರೆ.
‘‘ ಕೆಲವು ವ್ಯಕ್ತಿಗಳು, ‘ ಜೈಚಂದ್’ಗಳು ನನ್ನ ಪಾಲಕರಾದ ಲಾಲು ಪ್ರಸಾದ್ ಜೀ ಹಾಗೂ ನನ್ನ ತಾಯಿಯನ್ನು ಮಾನಸಿಕ ಹಾಗೂ ದೈಹಿಕ ಒತ್ತಡದಲ್ಲಿ ಸಿಲುಕಿಸಲು ಯತ್ನಿಸುತ್ತಿದ್ದಾರೆ. ಒಂದು ವೇಳೆ ಅದರಲ್ಲಿ ಸತ್ಯಾಂಶವಿದ್ದಲ್ಲಿ, ಇದು ನನ್ನ ಕುಟುಂಬದ ಮೇಲಿನ ದಾಳಿ ಮಾತ್ರವಲ್ಲ, ಆರ್ಜೆಡಿಯ ಆತ್ಮಕ್ಕೆ ನೇರ ಹೊಡೆತವಾಗಿದೆ. ಈ ವಿಷಯದ ಬಗ್ಗೆ ಬಿಹಾರ ಸರಕಾರವು ನಿಷ್ಪಕ್ಷಪಾತವಾಗಿ, ಕಟ್ಟುನಿಟ್ಟಾಗಿ ಹಾಗೂ ಶೀಘ್ರವಾಗಿ ತನಿಖೆಯನ್ನು ನಡೆಸಬೇಕೆಂದು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಬಿಹಾರ ಸರಕಾರವನ್ನು ಕೋರುತ್ತೇನೆ ಎಂದವರು ಎಕ್ಸ್ನಲ್ಲಿ ಬರೆದಿದ್ದಾರೆ.
ಬಿಹಾರದ ಮಾಜಿ ಸಚಿವರಾದ ತೇಜ್ಪ್ರತಾಪ್ ಯಾದವ್ ಆರ್ಜೆಡಿಯಿಂದ ಹೊರಬಂದ ಬಳಿಕ ತನ್ನದೇ ಸ್ವಂತ ಪಕ್ಷ ಜನಶಕ್ತಿ ಜನತಾದಳವನ್ನು ಸ್ಥಾಪಿಸಿದ್ದರು.







