ಐರನ್ ಮ್ಯಾನ್ ಸವಾಲು ಜಯಿಸಿದ ತೇಜಸ್ವಿ ಸೂರ್ಯ: ಮೋದಿ ಅಭಿನಂದನೆ

PC: x.com/Tejasvi_Surya
ಹೊಸದಿಲ್ಲಿ: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಭಾನುವಾರ ಐರನ್ ಮ್ಯಾನ್ 70.3 ಸವಾಲನ್ನು ಸಮರ್ಥವಾಗಿ ಜಯಿಸಿದ್ದಾರೆ. ಗೋವಾದಲ್ಲಿ ನಡೆದ ಈ ಟ್ರಯತ್ಲಾನ್ ಸ್ಪರ್ಧೆಯಲ್ಲಿ 1.9 ಕಿಲೋಮೀಟರ್ ಈಜು, 90 ಕಿಲೋಮೀಟರ್ ಸೈಕ್ಲಿಂಗ್ ಮತ್ತು 21.1 ಕಿಲೋಮೀಟರ್ ಓಟ ಹೀಗೆ 113 ಕಿಲೋಮೀಟರ್ (70.3 ಮೈಲು) ಕ್ರಮಿಸಬೇಕು. ಇದನ್ನು ಯಶಸ್ವಿಯಾಗಿ ಪೂರೈಸುವ ಮೂಲಕ ತೇಜಸ್ವಿಸೂರ್ಯ ಈ ಸಾಧನೆ ಮಾಡಿದ ಮೊಟ್ಟಮೊದಲ ಸಂಸದ ಎನಿಸಿಕೊಂಡಿದ್ದಾರೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾಗಿರುವ ತೇಜಸ್ವಿ ಸೂರ್ಯ, ತಮ್ಮ ಈ ವಿಶೇಷ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿಯವರ 'ಫಿಟ್ ಇಂಡಿಯಾ' ಚಳವಳಿ ಪ್ರೇರಣೆ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸ್ವತಃ ಎಕ್ಸ್ ನಲ್ಲಿ ಸೂರ್ಯ ಸಾಧನೆಯ ಗುಣಗಾನ ಮಾಡಿದ್ದಾರೆ. "ಶ್ಲಾಘನೀಯ ಸಾಧನೆ! ಇದು ಹಲವು ಮಂದಿ ಯುವಜನರಿಗೆ ಫಿಟ್ನೆಸ್ ಸಂಬಂಧಿತ ಚಟುವಟಿಕೆಗಳಿಗೆ ಸ್ಫೂರ್ತಿಯಾಗಲಿದೆ" ಎಂದು ಮೋದಿ ಬಣ್ಣಿಸಿದ್ದಾರೆ. ತಮ್ಮ ಫಿಟ್ನೆಸ್ ಸುಧಾರಿಸಿಕೊಳ್ಳಲು ಕಳೆದ ನಾಲ್ಕು ತಿಂಗಳಿಂದ ತೀವ್ರ ತರಬೇತಿ ಪಡೆದಿರುವುದಾಗಿ ಸೂರ್ಯ ವಿವರಿಸಿದ್ದಾರೆ.
"ಯುವ ದೇಶ ದೊಡ್ಡ ಮಹತ್ವಾಕಾಂಕ್ಷೆಯನ್ನು ಬೆನ್ನಟ್ಟಿದೆ. ನಾವು ನಮ್ಮ ದೇಹಧಾರ್ಢ್ಯತೆಯನ್ನು ಪೋಷಿಸಬೇಕು ಹಾಗೂ ಆರೋಗ್ಯವಂತ ದೇಶವಾಗಬೇಕು. ನೀವು ಸದೃಢರಾದರೆ ನಿಮ್ಮನ್ನು ಅದು ಹೆಚ್ಚು ಶಿಸ್ತು ಮತ್ತು ಆತ್ಮವಿಶ್ವಾಸದ ವ್ಯಕ್ತಿಗಳನ್ನಾಗಿ ಮಾಡುತ್ತದೆ. ನೀವು ಮಾಡುವ ಯಾವುದೇ ಕಾರ್ಯದಲ್ಲಿ ನಿಮಗೆ ಯಶಸ್ಸು ತರುತ್ತದೆ" ಎಂದು ಸೂರ್ಯ ಹೇಳಿದ್ದಾರೆ.
Commendable feat!
— Narendra Modi (@narendramodi) October 27, 2024
I am sure this will inspire many more youngsters to pursue fitness related activities. https://t.co/zDTC0RtHL7