ಮತದಾರರ ಪಟ್ಟಿ ಪರಿಷ್ಕರಣೆ | ಬಿಹಾರವನ್ನು ಮತದಾನ ಹಕ್ಕುಗಳಿಂದ ವಂಚಿಸಲು ಪ್ರಧಾನಿ ಮೋದಿ ಪಿತೂರಿ: ತೇಜಸ್ವಿ ಯಾದವ್

ತೇಜಸ್ವಿ ಯಾದವ್ | PC : ANI
ಪಾಟ್ನಾ: ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಶನಿವಾರ ತೀವ್ರ ವಾಗ್ದಾಳಿ ನಡೆಸಿರುವ ಆರ್ಜೆಡಿ ನಾಯಕ ಹಾಗೂ ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ಪ್ರಧಾನಿ ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ಚುನಾವಣಾ ಆಯೋಗದ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಧಾನಿಯವರು ಬಿಹಾರದ ಇಡೀ ಮತದಾರರ ಪಟ್ಟಿಯನ್ನು ರದ್ದುಗೊಳಿಸುವಂತೆ ಮತ್ತು 1987ರ ಮೊದಲಿನ ಕಾಗದ ರೂಪದ ದಾಖಲೆಗಳನ್ನು ಮಾತ್ರ ಬಳಸಿ 25 ದಿನಗಳಲ್ಲಿ ನೂತನ ಪಟ್ಟಿಯನ್ನು ಸಿದ್ಧಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿದ್ದಾರೆ. ಚುನಾವಣೆಯಲ್ಲಿ ಸೋಲು ಎದುರಿಸುವ ಹತಾಶೆಯಲ್ಲಿರುವ ಈ ಜನರು ಈಗ ಬಿಹಾರ ಮತ್ತು ಅದರ ಜನರನ್ನು ಮತದಾನದ ಹಕ್ಕುಗಳಿಂದ ವಂಚಿಸಲು ಪಿತೂರಿ ನಡೆಸುತ್ತಿದ್ದಾರೆ ಎಂದು ಯಾದವ್ ಎಕ್ಸ್ ಪೋಸ್ಟ್ ನಲ್ಲಿ ಆಪಾದಿಸಿದ್ದಾರೆ.
ಮತದಾರರ ಗುರುತಿನ ಚೀಟಿಗಳನ್ನು ನೀಡುವುದನ್ನು ತಡೆಯಲು ‘ವಿಶೇಷ ತೀವ್ರ ಪರಿಷ್ಕರಣೆ’ಯ ಸೋಗಿನಲ್ಲಿ ಅವರು ಮತದಾರರ ಪಟ್ಟಿಯಿಂದ ಜನರ ಹೆಸರುಗಳನ್ನು ತೆಗೆದುಹಾಕುತ್ತಾರೆ. ಇದರಿಂದ ಪಡಿತರ, ಪಿಂಚಣಿ, ಮೀಸಲಾತಿ, ವಿದ್ಯಾರ್ಥಿ ವೇತನದಂತಹ ಮೂಲಭೂತ ಕಲ್ಯಾಣ ಯೋಜನೆಗಳ ಲಾಭಗಳನ್ನು ಪಡೆಯಲು ಜನರಿಗೆ ಸಾಧ್ಯವಾಗುವುದಿಲ್ಲ ಎಂದು ತೇಜಸ್ವಿ ಹೇಳಿದ್ದಾರೆ.
‘ಶುಕ್ರವಾರ ಸುದ್ದಿಗೋಷ್ಠಿಯ ಸಂದರ್ಭದಲ್ಲಿ ನಾನು ಪ್ರತಿಪಕ್ಷಗಳ ಮೈತ್ರಿಕೂಟ ಮಹಾಘಟಬಂಧನ್ ನ ಇತರ ನಾಯಕರೊಂದಿಗೂ ಈ ವಿಷಯವನ್ನು ವಿವರವಾಗಿ ಚರ್ಚಿಸಿದ್ದೇನೆ ’ ಎಂದು ಅವರು ಎಕ್ಸ್ ನಲ್ಲಿ ಹೇಳಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿಯು ನಿತೀಶ ಕುಮಾರ್ ಅವರ ಜೆಡಿಯು ಜೊತೆ ಮೈತ್ರಿಯೊಂದಿಗೆ ಸ್ಪರ್ಧಿಸಲಿದೆ. ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ತೇಜಸ್ವಿ ಯಾದವ್ ಅವರ ಆರ್ಜೆಡಿಯು ಚುನಾವಣೆಗಳಲ್ಲಿ ಆಡಳಿತ ಮೈತ್ರಿಕೂಟವನ್ನು ಎದುರಿಸಲು ಸಜ್ಜಾಗಿದೆ.







