ತೇಜಸ್ವಿ ಯಾದವ್ ಹೆಸರು ಮತದಾರ ಪಟ್ಟಿಯಿಂದ ಕೈಬಿಟ್ಟಿಲ್ಲ: ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್

ತೇಜಸ್ವಿ ಯಾದವ್ | PC : PTI
ಪಾಟ್ನಾ,ಆ.2: ಭಾರತೀಯ ಚುನಾವಣಾ ಆಯೋಗವು ಶುಕ್ರವಾರ ಬಿಡುಗಡೆಗೊಳಿಸಿದ ಕರಡು ಮತದಾರ ಪಟ್ಟಿಯಲ್ಲಿ ತನ್ನ ಹೆಸರು ಕಾಣೆಯಾಗಿದೆಯೆಂಬ ಆರೋಪವನ್ನು ಪಾಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ. ತ್ಯಾಗರಾಜನ್ ಶನಿವಾರ ತಳ್ಳಿಹಾಕಿದ್ದಾರೆ.
ಮತದಾರಪಟ್ಟಿಯಲ್ಲಿ ತೇಜಸ್ವಿ ಯಾದವ್ ಅವರ ಹೆಸರಿರುವುದನ್ನು ದೃಢಪಡಿಸುವ ದಾಖಲೆಗಳನ್ನು ಅವರು ಹಂಚಿಕೊಂಡಿದ್ದಾರೆ. ಪಾಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಡಾ.ತ್ಯಾಗರಾಜನ್ ಈ ಕುರಿತ ಮಾಹಿತಿಯನ್ನು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ.
‘‘ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗಾಗಿನ ಕರಡು ಮತದಾರಪಟ್ಟಿಯಲ್ಲಿ ತೇಜಸ್ವಿ ಪ್ರಸಾದ್ ಯಾದವ್ ಅವರ ಹೆಸರು ಸೇರ್ಪಡೆಗೊಂಡಿಲ್ಲವೆಂದು ಕೆಲವು ಸುದ್ದಿ ಮೂಲಗಳಿಂದ ನನಗೆ ತಿಳಿದುಬಂದಿತು. ಈ ನಿಟ್ಟಿನಲ್ಲಿ ಪಾಟ್ನಾ ಜಿಲ್ಲಾಡಳಿತವು ತನಿಖೆ ನಡೆಸಿದೆ.ಅವರ ಹೆಸರು ಕರಡು ಮತದಾರ ಪಟ್ಟಿಯಲ್ಲಿ ನೋಂದಣಿಯಾಗಿರುವುದಾಗಿ ಸ್ಪಷ್ಟಪಡಿಸುತ್ತೇವೆ ಎಂದವರು ಹೇಳಿದ್ದಾರೆ.
ಪ್ರಸಕ್ತ ಅವರ ಹೆಸರು ಬಿಹಾರ ಪಶು ವಿಜ್ಞಾನ ವಿಶ್ವವಿದ್ಯಾನಿಲಯದ ಗ್ರಂಥಾಲಯ ಕಟ್ಟಡದ ಮತಗಟ್ಟೆ ಸಂಖ್ಯೆ 204ರ ಮತದಾರಪಟ್ಟಿಯಲ್ಲಿದೆ ಹಾಗೂ ಸರಣಿ ಸಂಖ್ಯೆ 416 ಆಗಿದೆ. ಈ ಮೊದಲು ಅವರ ಹೆಸರು ಬಿಹಾರ ಪಶುವಿಜ್ಞಾನ ವಿವಿಯ ಗ್ರಂಥಾಲಯ ಕಟ್ಟಡದಲ್ಲಿನ ಮತಗಟ್ಟೆ ಸಂಖ್ಯೆ 171ರಲ್ಲಿ ದಾಖಲಾಗಿದ್ದು, 481 ಸರಣಿ ಸಂಖ್ಯೆಯಲ್ಲಿದೆಯೆಂದು ಅವರು ತಿಳಿಸಿದ್ದಾರೆ.







