ನನ್ನ ತಾಯಿಯನ್ನು ನಿಂದಿಸಲಾಗಿದೆ ಎಂಬ ಪ್ರಧಾನಿಯ ಆರೋಪ: ದ್ವಿಮುಖ ನೀತಿ ಎಂದು ವಾಗ್ದಾಳಿ ನಡೆಸಿದ ತೇಜಸ್ವಿ ಯಾದವ್

ತೇಜಸ್ವಿ ಯಾದವ್ | PC : PTI
ಹೊಸದಿಲ್ಲಿ: ನನ್ನ ತಾಯಿಯನ್ನು ಬಿಹಾರ ಸಮಾವೇಶದಲ್ಲಿ ನಿಂದಿಸಲಾಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯು ದ್ವಿಮುಖ ನೀತಿಯಾಗಿದೆ ಎಂದು ವಾಗ್ದಾಳಿ ನಡೆಸಿದ ಆರ್ ಜೆ ಡಿ ಮುಖ್ಯಸ್ಥ ತೇಜಸ್ವಿ ಯಾದವ್, ಪ್ರಧಾನಿ ಮೋದಿ ಈ ಹಿಂದೆ ನೀಡಿದ್ದ ’50 ಕೋಟಿಯ ಗೆಳತಿ’ ಹಾಗೂ ‘ಜೆರ್ಸಿ ಹಸು’ ಎಂಬ ಕುಖ್ಯಾತ ಹೇಳಿಕೆ ಸೇರಿದಂತೆ ಈ ಹಿಂದಿನ ಅವರ ಹಲವು ಹೇಳಿಕೆಗಳನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ತೇಜಸ್ವಿ ಯಾದವ್, “ಒಂದು ವೇಳೆ ಮೋದಿಯೇನಾದರೂ ಮತ್ತೊಬ್ಬರ ತಾಯಿಯನ್ನು 50 ಕೋಟಿಯ ಗೆಳತಿ ಎಂದರೆ ಅದು ಧೀರೋದಾತ್ತ ಹೇಳಿಕೆ!” ಎಂದು ವ್ಯಂಗ್ಯವಾಡಿದ್ದಾರೆ.
“ಒಂದು ವೇಳೆ ಮೋದಿಯೇನಾದರೂ ಹುತಾತ್ಮ ಪ್ರಧಾನಿಯ ಧೀರ ಪತ್ನಿ ಹಾಗೂ ಲೋಕಸಭಾ ವಿಪಕ್ಷ ನಾಯಕರ ತಾಯಿಯನ್ನು ‘ವಿಧವೆ’ ಅಥವಾ ‘ಜೆರ್ಸಿ ಹಸು’ ಎಂದು ಹಂಗಿಸಿದರೆ, ಅದನ್ನು ನಾಚಿಕೆಗೇಡು ಜನ ಅದ್ಭುತ ಭಾಷಣ ಎಂದು ಪ್ರಶಂಸಿಸುತ್ತಾರೆ” ಎಂದೂ ಚಾಟಿ ಬೀಸಿದ್ದಾರೆ.
“ಕೆಲವು ದ್ವಿಮುಖ ನೀತಿಯ ಜನರಿದ್ದು, ಅವರು ಮತಗಳ್ಳತನದಿಂದ ಜನರ ಗಮನ ಬೇರೆ ಸೆಳೆಯಲು ಚಿತ್ತಭಂಗದ ಸನ್ನಿವೇಶಗಳನ್ನು ಸೃಷ್ಟಿಸುತ್ತಾರೆ” ಎಂದು ಅವರು ಟೀಕಾಪ್ರಹಾರ ನಡೆಸಿದ್ದಾರೆ.
‘ತಾಯಿಯೆಂದಿಗೂ ತಾಯಿಯೇ’ ಎಂದು ಒತ್ತಿ ಹೇಳಿರುವ ತೇಜಸ್ವಿ ಯಾದವ್, ತಮ್ಮ ಈಗಿನ ಮಿತ್ರ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಪ್ರಧಾನಿ ಮೋದಿ ನೀಡಿದ್ದ ಡಿಎನ್ಎ ಹೇಳಿಕೆಯನ್ನೂ ಉಲ್ಲೇಖಿಸಿದ್ದಾರೆ. ಅಲ್ಲದೆ, ಅತ್ಯಾಚಾರ ಪ್ರಕರಣದಲ್ಲಿ ದೋಷಿಯೆಂದು ಶಿಕ್ಷೆಗೊಳಗಾಗಿರುವ ಪ್ರಜ್ವಲ್ ರೇವಣ್ಣರ ಪರ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಮಾಡಿದ್ದರತ್ತಲೂ ಬೊಟ್ಟು ಮಾಡಿದ್ದಾರೆ.
“ಒಂದು ವೇಳೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರದ್ದು ತಪ್ಪು ಡಿಎನ್ಎ ಎಂದು ಕರೆಯುವ ಮೂಲಕ, ಮೋದಿ ಅವರ ಮೂಲವನ್ನು ಪ್ರಶ್ನಿಸಿದರೆ, ಅರ್ಥಾತ್ ಅವರ ರಕ್ತ ಕಲಬೆರಕೆಯದ್ದು ಎಂದು ಹೇಳಿದರೆ, ಅದನ್ನು ಸಮರ್ಥಿಸಿಕೊಳ್ಳಲು ಸಾಧ್ಯವೇ? ಈ ಹೇಳಿಕೆಯನ್ನು ಪ್ರತಿಭಟಿಸಿ ಪ್ರಧಾನಿ ಕಾರ್ಯಾಲಯಕ್ಕೆ ರವಾನಿಸಲಾಗಿದ್ದ ಉಗುರು ಹಾಗೂ ಕೂದಲುಗಳೇನಾದರೂ ಮರಳಿ ವಾಪಸು ಬಂದವೆ ಎಂಬುದನ್ನು ಜೆಡಿಯು ನಾಯಕರು ಸ್ಪಷ್ಟಪಡಿಸುವರೆ?” ಎಂದೂ ಅವರು ಛೇಡಿಸಿದ್ದಾರೆ.







