ಪ್ರಧಾನಿ ಮೋದಿ ಕುರಿತ ಪೋಸ್ಟ್: ಆರ್ಜೆಡಿ ನಾಯಕ ತೇಜಸ್ವಿ ಯಾದವ್ ವಿರುದ್ಧ ಎಫ್ಐಆರ್

ತೇಜಸ್ವಿ ಯಾದವ್ (Photo: PTI)
ಲಕ್ನೋ : ಪ್ರಧಾನಿ ನರೇಂದ್ರ ಮೋದಿ ಕುರಿತ ಸಾಮಾಜಿಕ ಮಾಧ್ಯಮಗಳಲ್ಲಿನ ಪೋಸ್ಟ್ಗೆ ಸಂಬಂಧಿಸಿದಂತೆ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ನಾಯಕ ತೇಜಸ್ವಿ ಯಾದವ್ ವಿರುದ್ಧ ಸದರ್ ಬಝಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಬಗ್ಗೆ ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ.
ಬಿಜೆಪಿ ನಗರ ಘಟಕದ ಅಧ್ಯಕ್ಷೆ ಶಿಲ್ಪಿ ಗುಪ್ತಾ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಎಫ್ಐಆರ್ ದಾಖಲಿಸಿರುವ ಬಗ್ಗೆ ಎಸ್ಪಿ ರಾಜೇಶ್ ದ್ವಿವೇದಿ ದೃಢಪಡಿಸಿದ್ದಾರೆ.
ಬಿಹಾರದ ಮಾಜಿ ಉಪಮುಖ್ಯಮಂತ್ರಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 353(2) ಮತ್ತು 197(1)ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಆರ್ಜೆಡಿಯ ಅಧಿಕೃತ ಖಾತೆಯಿಂದ ಮಾಡಿರುವ ಪೋಸ್ಟ್ನಲ್ಲಿ "ಇಂದು ಮತ ಕಳ್ಳ ಬಿಹಾರದ ಗಯಾಗೆ ಬರುತ್ತಾನೆ. ಬಿಹಾರಿಗಳ ಮುಂದೆ ಸುಳ್ಳಿನ ಮೇಲೆ ಸುಳ್ಳು ಹೇಳುತ್ತಾನೆ" ಎಂದು ಬರೆಯಲಾಗಿದೆ ಎಂದು ಗುಪ್ತಾ ಹೇಳಿದ್ದಾರೆ.
ಇದಲ್ಲದೆ ಶಾಸಕ ಮಿಲಿಂದ್ ನರೋಟೆ ಅವರ ದೂರಿನ ಮೇರೆಗೆ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಕೂಡ ಯಾದವ್ ವಿರುದ್ಧ ಪ್ರತ್ಯೇಕ ಎಫ್ಐಆರ್ ದಾಖಲಾಗಿರುವ ಬಗ್ಗೆ ವರದಿಯಾಗಿದೆ.





