ಬಿಹಾರ | ಕರಡು ಮತಪಟ್ಟಿಯಿಂದ ನನ್ನ ಹೆಸರು ನಾಪತ್ತೆಯಾಗಿದೆ: ತೇಜಸ್ವಿ ಯಾದವ್ ಆರೋಪ

ಪಟ್ನಾ: ಆಗಸ್ಟ್ 1, 2025ರಂದು ಬಿಡುಗಡೆಯಾಗಿರುವ ಬಿಹಾರದ ಕರಡು ಮತಪಟ್ಟಿಯಿಂದ ನನ್ನ ಹೆಸರು ನಾಪತ್ತೆಯಾಗಿದೆ ಎಂದು ಆರ್ಜೆಡಿ ನಾಯಕ ಹಾಗೂ ಬಿಹಾರದ ಮಾಜಿ ಡಿಸಿಎಂ ತೇಜಸ್ವಿ ಯಾದವ್ ಆರೋಪಿಸಿದ್ದಾರೆ.
ಈ ಕುರಿತು ಭಾರತೀಯ ಚುನಾವಣಾ ಆಯೋಗವನ್ನು ಪ್ರಶ್ನಿಸಿರುವ ತೇಜಸ್ವಿ ಯಾದವ್, "ನಾನು ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಹೇಗೆ ಸ್ಪರ್ಧಿಸಲು ಸಾಧ್ಯ?” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಇದು ಪ್ರಜಾಪ್ರಭುತ್ವದ ಹತ್ಯೆ, ಮತದಾರರ ಹಕ್ಕುಗಳ ಲಪಟಾಯಿಸುವಿಕೆಯಾಗಿದೆ” ಎಂದು ಅವರು ಹೇಳಿದ್ದಾರೆ.
ತೇಜಸ್ವಿ ಯಾದವ್ ಅವರು ತಮ್ಮ ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು ಮಾಧ್ಯಮಗಳ ಮುಂದೆಯೇ ಭಾರತೀಯ ಚುನಾವಣಾ ಆಯೋಗದ ಅಧಿಕೃತ ಅಂತರ್ಜಾಲ ತಾಣದಲ್ಲಿ ನಮೂದಿಸಿ, ಕ್ಯಾಪ್ಚಾ ಹಾಕಿದಾಗ, ಅದರಲ್ಲಿ ಅವರ ಯಾವುದೇ ವಿವರಗಳು ಕಂಡು ಬರಲಿಲ್ಲ.
ಭಾರತೀಯ ಚುನಾವಣಾ ಆಯೋಗವು ಬಿಜೆಪಿಯ ಘಟಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದೂ ಅವರು ಆರೋಪಿಸಿದರು.
ತೇಜಸ್ವಿ ಯಾದವ್ ಅವರು ದಿಘಾ ವಿಧಾನಸಭಾ ಕ್ಷೇತ್ರದ ಮತದಾರರಾಗಿದ್ದು, ರಘೋಪುರ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.





