ಆರ್ಜೆಡಿ ಟಿಕೆಟ್ಗಳನ್ನು ವಿತರಿಸಿದ ಲಾಲು; ನಿಲ್ಲಿಸಿದ ತೇಜಸ್ವಿ!

ತೇಜಸ್ವಿ ಯಾದವ್ | Photo Credit : PTI
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಸೋಮವಾರ ಸಂಜೆಯಿಂದ ಮಂಗಳವಾರ ಮುಂಜಾನೆವರೆಗೂ ತನ್ನ ಪಕ್ಷದ ಅಭ್ಯರ್ಥಿಗಳಿಗೆ ಟಿಕೆಟ್ಗಳನ್ನು ನೀಡಿದ್ದಾರೆ. ಆದರೆ, ಬಳಿಕ ಅವರ ಮಗ ತೇಜಸ್ವಿ ಯಾದವ್ ಮಧ್ಯಪ್ರವೇಶಿಸಿದ ಬಳಿಕ ಟಿಕೆಟ್ ವಿತರಣೆಯನ್ನು ನಿಲ್ಲಿಸಿದರು. ಬಿಹಾರದಲ್ಲಿ ಇಂಡಿಯಾ ಮೈತ್ರಿಕೂಟದ ಸ್ಥಾನ ಹಂಚಿಕೆ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ ಎನ್ನುವುದನ್ನು ತೇಜಸ್ವಿ ಯಾದವ್ ತನ್ನ ತಂದೆಯ ಗಮನಕ್ಕೆ ತಂದರು ಎಂದು ವರದಿಯಾಗಿದೆ.
ಸೋಮವಾರ ಸಂಜೆ ಲಾಲು ಮತ್ತು ಅವರ ಪತ್ನಿ ರಾಬ್ರಿ ದೇವಿ ದಿಲ್ಲಿಯಿಂದ ಹಿಂದಿರುಗಿದ ಬಳಿಕ ಪಾಟ್ನಾದಲ್ಲಿರುವ ಅವರ ಬಂಗಲೆಯ ಹೊರಗೆ ಕಾಲ್ತುಳಿತದಂಥ ಪರಿಸ್ಥಿತಿ ಏರ್ಪಟ್ಟಿತ್ತು. ಪಕ್ಷದಿಂದ ಕರೆ ಬಂದ ಬಳಿಕ ಟಿಕೆಟ್ ಆಕಾಂಕ್ಷಿಗಳು ಅಲ್ಲಿ ಭಾರೀ ಸಂಖ್ಯೆಯಲ್ಲಿ ನೆರೆದಿದ್ದರು. ಟಿಕೆಟ್ ಆಕಾಂಕ್ಷಿಗಳು ಬಂಗಲೆಯೊಳಗೆ ಹೋಗಿ ನಿಮಿಷಗಳ ಬಳಿಕ ಕೈಯಲ್ಲಿ ಪಕ್ಷದ ಚಿಹ್ನೆ ಮತ್ತು ಮುಖದಲ್ಲಿ ನಗುವಿನೊಂದಿಗೆ ಹೊರಬಂದರು.
ಆದರೆ, ಕೆಲವು ಗಂಟೆಗಳ ಬಳಿಕ ದಿಲ್ಲಿಯಿಂದ ಮರಳಿದ ತೇಜಸ್ವಿ ಈ ಬೆಳವಣಿಗೆಯನ್ನು ಕಂಡು ಅಸಂತುಷ್ಟರಾದರು ಎನ್ನಲಾಗಿದೆ. ಪಕ್ಷದ ಚಿಹ್ನೆಯೊಂದಿಗೆ ಅಭ್ಯರ್ಥಿಗಳು ಹೊರಬರುತ್ತಿರುವ ಚಿತ್ರವು ಇಂಡಿಯಾ ಮೈತ್ರಿಕೂಟದ ಪಕ್ಷಗಳಿಗೆ ಪಥ್ಯವಾಗುವುದಿಲ್ಲ, ಯಾಕೆಂದರೆ ಪಕ್ಷಗಳ ನಡುವೆ ಸ್ಥಾನ ಹಂಚಿಕೆ ಒಪ್ಪಂದ ಇನ್ನೂ ಘೋಷಣೆಯಾಗಿಲ್ಲ ಎಂದು ಅವರು ಹೇಳಿದರು.
ಹಾಗಾಗಿ, ಪಕ್ಷದ ಟಿಕೆಟ್ಗಳ ವಿತರಣೆಯು ನಿಂತಿತು ಮತ್ತು ಅದಾಗಲೇ ಪಡೆದವರಿಗೆ ʼತಾಂತ್ರಿಕ ಸಮಸ್ಯೆʼಯ ಹಿನ್ನೆಲೆಯಲ್ಲಿ ಅವುಗಳನ್ನು ಹಿಂದಿರುಗಿಸುವಂತೆ ಸೂಚಿಸಲಾಯಿತು.







