ಪದತ್ಯಾಗಕ್ಕೆ ಮುಂದಾದ ತೇಜಸ್ವಿ ಯಾದವ್; ಲಾಲೂ ಮಧ್ಯಪ್ರವೇಶ

PC: PTI
ಪಾಟ್ನಾ: ಬಿಹಾರ ರಾಜಕೀಯದಲ್ಲಿ 'ಯಾದವೀ ಕಲಹ' ತಾರಕಕ್ಕೇರುತ್ತಿದ್ದಂತೆ ತೇಜಸ್ವಿ ಯಾದವ್ ರಾಷ್ಟ್ರೀಯ ಜನತಾದಳ ಶಾಸಕಾಂಗ ಪಕ್ಷದ ಮುಖಂಡ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ಘಟನೆ ವರದಿಯಾಗಿದೆ. ತಕ್ಷಣ ಮಧ್ಯಪ್ರವೇಶಿಸಿದ ಹಿರಿಯ ಮುಖಂಡ ಲಾಲೂ ಪ್ರಸಾದ್ ಯಾದವ್, ಈ ಹುದ್ದೆಯಲ್ಲಿ ಮುಂದುವರಿಯುವಂತೆ ತೇಜಸ್ವಿಯವರ ಮನವೊಲಿಸಿದರು ಎಂದು ಸಭೆಯಲ್ಲಿ ಹಾಜರಿದ್ದ ಶಾಸಕರೊಬ್ಬರು ಬಹಿರಂಗಪಡಿಸಿದ್ದಾರೆ.
ಸಹೋದರಿ ರೋಹಿಣಿ ಆಚಾರ್ಯ ಬಹಿರಂಗವಾಗಿ ದುರ್ನಡತೆ ಆರೋಪ ಮಾಡಿದ ಹಿನ್ನೆಲೆಯಲ್ಲಿ ಮತ್ತು ಅಣ್ಣ ತೇಜ್ ಪ್ರತಾಪ್ ಅವರ ವಾಗ್ದಾಳಿ ಹಿನ್ನೆಲೆಯಲ್ಲಿ ತೀರಾ ಭಾವುಕರಾಗಿದ್ದ ತೇಜಸ್ವಿ, ಶಾಸಕಾಂಗ ಪಕ್ಷದ ಸಭೆಯಲ್ಲಿ, ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಶಾಸಕರು ಮುಕ್ತ ಎಂದು ಘೋಷಿಸಿದರು. ಆಗ ಲಾಲೂ ಪ್ರಸಾದ್ ಯಾದವ್ ಮಧ್ಯಪ್ರವೇಶಿಸಿ, ತೇಜಸ್ವಿ ಈ ಹುದ್ದೆಯಲ್ಲಿ ಮುಂದುವರಿಯಬೇಕು ಎಂದು ಸೂಚಿಸಿದರು.
ಬಳಿಕ ಹೊಸದಾಗಿ ಆಯ್ಕೆಯಾದ ಆರ್ ಜೆಡಿ ಶಾಸಕರು ತೇಜಸ್ವಿಯವರನ್ನು ಶಾಸಕಾಂಗ ಪಕ್ಷದ ಮುಖಂಡರಾಗಿ ಆಯ್ಕೆ ಮಾಡಿದರು. ಲಾಲೂ ಅವರ ಹೊರತಾಗಿ ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಲಾಲೂ ಪತ್ನಿ ರಾಬ್ಡಿದೇವಿ, ಅಕ್ಕ ಹಾಗೂ ಸಂಸದೆ ಮಿಸಾ ಭಾರ್ತಿ ಸಭೆಯಲ್ಲಿ ಉಪಸ್ಥಿತರಿದ್ದರು. ಕುಟುಂಬ ಕಲಹದಲ್ಲಿ ಕೇಂದ್ರ ಬಿಂದು ಎನಿಸಿದ ತೇಜಸ್ವಿಯವರ ನಿಕಟವರ್ತಿ ಸಂಜಯ್ ಯಾದವ್ ಕೂಡ ಭಾಗವಹಿಸಿದ್ದರು.
"ತೇಜಸ್ವಿಯವರು ಭಾವುಕರಾಗಿದ್ದರು. ಪಕ್ಷದ ನಾಯಕರನ್ನಾಗಿ ಬೇರೆಯವರನ್ನು ಆಯ್ಕೆ ಮಾಡಲು ಶಾಸಕರು ಸ್ವತಂತ್ರರು ಎಂದು ಅವರು ಹೇಳಿದರು. ರೋಹಿಣಿಯವರ ಮೇಲೆ ಪರೋಕ್ಷ ವಾಗ್ದಾಳಿ ನಡೆಸಿದ ಅವರು, ಕೆಲವರಿಗೆ ಟಿಕೆಟ್ ನಿರಾಕರಿಸುವಂತೆ ಮಾಡಿಕೊಂಡಿದ್ದ ಮನವಿಯನ್ನು ತಿರಸ್ಕರಿಸಿದ್ದಾಗಿ ಹೇಳಿದರು. ನಾನೇನು ಮಾಡಬೇಕು? ಪಕ್ಷವನ್ನು ನೋಡಬೇಕೇ ಆಥವಾ ಕುಟುಂಬವನ್ನೇ? ಎಂದು ಪ್ರಶ್ನಿಸಿದರು. ಪಕ್ಷದ ಕಳಪೆ ಪ್ರದರ್ಶನದ ಬಗ್ಗೆ, ಅದರಲ್ಲೂ ಪ್ರಮುಖವಾಗಿ ಕಡಿಮೆ ಅಂತರದಿಂದ ಸೋತ ಸ್ಥಾನಗಳ ಬಗ್ಗೆಯೂ ಚರ್ಚೆ ನಡೆಯಿತು" ಎಂದು ಮೂಲಗಳು ವಿವರಿಸಿವೆ.







